ಹಾವೇರಿ :-ಜಿಲ್ಲೆ ಹಾನಗಲ್ಲ ತಾಲೂಕಿನ ಹಿರೇಕೌಂಶಿಯಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ರೈತ ಸಂಘದ ಅಧ್ಯಕ್ಷ ಮರೀಗೌಡ ಪಾಟೀಲ ಗಿಡಕ್ಕೆ ನಿರೇರೆದು ಉದ್ಘಾಟಿಸಿದರು.
ಹೆಚ್ಚುತ್ತಿರುವ ಕಲ್ಮಶ, ವಿಷಪೂರೀತ ವಾಯು ಹಾಗೂ ಅತೀಯಾದ ರಾಸಾಯನಿಕ ಮಿಶ್ರಿತ ಕೃಷಿಯಿಂದ ಭೂಮಿ ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮೋಹನಕುಮಾರ ಹೇಳಿದರು. ತಾಲೂಕಿನ ಹಿರೇಕಾಂಶಿಯಲ್ಲಿ ಕೃಷಿ ಇಲಾಖೆ ಹಾಗೂ ಲೋಕಪರಮೇಶ್ವರಿ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಕೃಷಿ ಜ್ಞಾನ ಅಪಾರವಾಗಿದೆ. ಆದರೂ ಕೂಡಾ ಆಹಾರದ ಕೊರತೆ ಉಂಟಾಗಿ ಹಸಿರು ಕ್ರಾಂತಿ ಮಾಡಬೇಕಾಗಿ ಬಂತು. ಹೆಚ್ಚಿನ ಇಳುವರಿ ಆಸೆಗೆ ಕ್ರಿಮಿನಾಶಕ, ರಾಸಾಯನಿಕ ಮಿಶ್ರಿತ ಗೊಬ್ಬರ, ಬೀಜ ಬಳಸುತ್ತಿರುವುದರಿಂದ ಭೂಮಿ ಕಲುಷಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರೈತರು ಸಾಧ್ಯವಾದಷ್ಟು ರಾಸಯನಿಕ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು. ಮಣ್ಣನ್ನು ನಾವು ರಕ್ಷಿಸಿದರೆ ಮಣ್ಣು ನಮ್ಮನ್ನು ರಕ್ಷಿಸುತ್ತದೆ. ಮಣ್ಣಿನ ಸವಕಳಿ ಆಗದಂತೆ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳಬೇಕು. ಇನ್ನು ಮುಂದಾದರು ಸಾವಯವ ಕೃಷಿ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರಿಗೆ ಸಂಕಷ್ಟ ಎದುರಾಗುವ ಎಲ್ಲ ಸಾಧ್ಯತೆಯಿದೆ ಎಂದರು.
ಕೃಷಿ ಇಲಾಖೆ ಮೂಲಕ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ನೀಡಲಾಗುತ್ತಿದ್ದು, ರೈತರು ಆರೋಗ್ಯ ಕಾರ್ಡ್ನಲ್ಲಿನ ಶಿಫಾರಸ್ಸುಗಳನ್ನು ಅನುಸರಿಸಿ ಕೃಷಿ ವೆಚ್ಚ ಕಡಿಮೆ ಮಾಡಿಕೊಂಡು, ಸುಸ್ಥಿರ ಕೃಷಿ ನಡೆಸುವಂತೆ ಸಲಹೆ ನೀಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಮರೀಗೌಡ ಪಾಟೀಲ ಮಾತನಾಡಿ, ಮಣ್ಣಿನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು. ಯಾವ ಅವಧಿಯಲ್ಲಿ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಯಾವ ಬೆಳೆ ಬೆಳೆಯಬೇಕು ಎಂಬ ಪಾರಂಪರಿಕ ಕಲ್ಪನೆಯೇ ನಮ್ಮ ರೈತರಲ್ಲಿ ಹೊರಟು ಹೋಗಿದೆ. ರೈತರು ಸಾಧ್ಯವಾದಷ್ಟು ಹೈನು ಸಾಕಾಣಿಕೆ ಮಾಡುವ ಮೂಲಕ ತಮ್ಮ ಜಮೀನಿಗೆ ಬೇಕಾದ ಕೊಟ್ಟಿಗೆ ಗೊಬ್ಬರವನ್ನು ಉತ್ಪಾದಿಸಿ ಬಳಸುವ ಮೂಲಕ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು. ಈ ಮೂಲಕ ಮಣ್ಣಿನ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದರು.
ಶ್ರೇಷ್ಟ ಕೃಷಿಕ ಪ್ರಶಸ್ತಿ ಪುರಸ್ಕøತ ಲಕ್ಷ್ಮಣ ಕೊಡಿಹಳ್ಳಿ ಮಾತನಾಡಿ, ರೈತರು ಏಕಬೆಳೆ ಪದ್ಧತಿ ಅನುಸರಿಸದೆ ಸಮಗ್ರ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ರಾಸಾಯನಿಕ ಬಳಕೆ ಕಡಿಮೆ ಮಾಡಬೇಕು. ಹಸಿರು ಗೊಬ್ಬರ ಬಳಕೆಯೊಂದಿಗೆ ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು.
ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಆರೋಗ್ಯಯು ಮಣ್ಣು ಹಸ್ತಾಂತರ ಸಾಧ್ಯವಾಗದು ಎಂದರು.
ಕಾರ್ಯಕ್ರಮದಲ್ಲಿ ಆಯ್ದ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಯಿತು.
ವೇದಿಕೆಯಲ್ಲಿ ಲೋಕಪರಮೇಶ್ವರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಸಂಕನಗೌಡ ದೇವಿಕೊಪ್ಪ, ನಿರ್ದೇಶಕರುಗಳಾದ ಬಸವರಾಜ ಗಿಣಿವಾಲದ, ಬಸನಗೌಡ ದೇವಿಕೊಪ್ಪ, ನಾಗರಾಜ ಗಿಣಿವಾಲದ ರೈತ ಸಂಘದ ಹಿರೇಕಾಂಶಿ ಗ್ರಾಮ ಘಟಕದ ಅಧ್ಯಕ್ಷ ಕರಬಸಪ್ಪ ಮಾಕೊಪ್ಪದ, ಶಿವನಗೌಡ ಓದೇಗೌಡ್ರು, ರಾಜು ಚೆನ್ನಗೌಡರ, ಜಡೆಗೊಂಡರ ಹಾಗೂ ರೈತರು ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಕಾರ್ಯಕ್ರಮ ನಿರೂಪಿಸಿದರು, ಲೋಕಪರಮೇಶ್ವರಿ ರೈತ ಉತ್ಪಾದಕ ಕಂಪನಿ ಸಿಇಓ ರಾಜೇಶ ಪಾಟೀಲ ವಂದಿಸಿದರು, ಆತ್ಮಾ ಯೋಜನೆ ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ಬಸವರಾಜ ಮಣಕೂರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶೃತಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಬಸವರಾಜ ಪಾಟೀಲ, ಕೃಷಿ ಸಂಜೀವಿನಿ ತಾಂತ್ರಿಕ ಸಿಬ್ಬಂದಿ ಮೌನೇಶ ಬಡಿಗೇರ ಸಹಕರಿಸಿದರು.