ದಾವಣಗೆರೆ:– ಬಿ ಎಸ್ ವೈ ಹಾಗೂ ವಿಜಯೇಂದ್ರ ಬಗ್ಗೆ ಯತ್ನಾಳ್ ಅವರು ಏಕೆ ಇಂತಹ ಆರೋಪಗಳನ್ನ ಮಾಡ್ತಿದ್ದಾರೆ ಅಂತಾ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸುಖಾ ಸುಮ್ಮನೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್ ಹಲವು ಆರೋಪಗಳನ್ನ ಮಾಡ್ತಿದ್ದಾರೆ. ಸ್ವಿಸ್ ಬ್ಯಾಂಕ್ ಹಣ ಇಟ್ಟಿದ್ದಾರೆ, ವಿದೇಶಗಳಲ್ಲಿ ಆಸ್ತಿ ಮಾಡಿದ್ದಾರೆ ಅಂತೆಲ್ಲಾ ಮಾತನಾಡುತ್ತೀದ್ದಾರೆ. ಇಂತಹ ಟೀಕೆಗಳಿಂದಲೇ ಈ ಹಿಂದೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಇಲ್ಲವಾದರೆ ನಮಗೆ 2018ರಲ್ಲೇ ಸ್ಪಷ್ಟ ಬಹುಮತ ಸಿಗುತ್ತಿತ್ತು ಎಂದು ಅಭಿಪ್ರಾಯಪಟ್ಟಿರುವ ರೇಣುಕಾಚಾರ್ಯ, ಇಂತಹ ಟೀಕೆಗಳ ಪರಿಣಾಮದಿಂದಲೇ 2018ರಲ್ಲಿ ಬಿಜೆಪಿಗೆ 104 ಸೀಟ್ ಬಂದವು ಎಂದು ಹೇಳಿದ್ದಾರೆ.
ಬಿಎಸ್ವೈ ಹಾಗೂ ವಿಜಯೇಂದ್ರ ವಿರುದ್ಧದ ಯತ್ನಾಳ್ ಆರೋಪಗಳಿಗೆ ತಿರುಗೇಟು ನೀಡಿದರು. ಹಗಲು ಗನಸು ಕಾಣಬೇಡಿ, ನೀವು ಭ್ರಮಾ ಲೋಕದಲ್ಲಿದ್ದೀರಿ, ಸಂಘಟನೆ ಆಧಾರದ ಮೇಲೆ ಬನ್ನಿ ಎಂದೂ ಯತ್ನಾಳ್ಗೆ ರೇಣುಕಾಚಾರ್ಯ ಬುದ್ದಿ ಮಾತು ಹೇಳಿದ್ದಾರೆ.
ನಮಗೂ ಏರು ಧ್ವನಿಯಲ್ಲಿ ಮಾತಾಡೋಕೆ ಬರುತ್ತೆ. ಈ ಹಿಂದೆ ಯತ್ನಾಳ್ ಅವರನ್ನ ಕೇಂದ್ರ ಸಚಿವರನ್ನಾಗಿ ಮಾಡಿದ್ದು ಯಡಿಯೂರಪ್ಪ. ಅಲ್ಲದೆ, ಯತ್ನಾಳ್ ಜೆಡಿಎಸ್ಗೆ ಹೋದಾಗ ಮತ್ತೆ ಬಿಜೆಪಿಗೆ ಕರೆ ತಂದಿದ್ದು ಯಡಿಯೂರಪ್ಪ. ಆಗಲೇ ನಮ್ಮವರು ಎಚ್ಚರಿಸಿದ್ದರು. ಯತ್ನಾಳ್ ಅವರ ಬಾಯಿ ಸುಮ್ಮನಿರಲ್ಲ, ಮುಂದೇ ಏನೇನೋ ಮಾತಾಡುತ್ತಾರೆ ಅಂತ ಕೆಲವರು ಹಿಂದೆಯೇ ನಮಗೆ ಎಚ್ಚರಿಕೆಯ ಮಾತುಗಳನ್ನ ಹೇಳಿದ್ದರು.
ಆದರೂ ಬಹುತೇಕರ ವಿರೋಧದ ಮಧ್ಯೆ ಯತ್ನಾಳ್ ಅವರನ್ನು ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಕರೆ ತಂದಿದ್ದರು. ಇದಾದ ಬಳಿಕ ಮಂತ್ರಿ ಮಾಡಿಲ್ಲ, ರಾಜ್ಯಾಧ್ಯಕ್ಷ ಮಾಡಿಲ್ಲ ಅನ್ನೋ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಯತ್ನಾಳ್ ಪದೇ ಪದೇ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರನ್ನ ಏಕೆ ಟಾರ್ಗೆಟ್ ಮಾಡಿ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಹೀಗೆ ಮಾತಾಡುವುದು ನಿಮಗೆ ಶೋಭೆ ತರಲ್ಲ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದು ಕಿವಿ ಮಾತು ಹೇಳಿದರು
ಯತ್ನಾಳ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ನಮಗೂ ಅಡ್ಜಸ್ಟ್ ಮೆಂಟ್ ರಾಜಕಾರಣ ಎಲ್ಲ ಗೊತ್ತಿದೆ. ಯತ್ನಾಳ್ ಅವರ ಅಡ್ಜಸ್ಟ್ ಮೆಂಟ್ ಯಾರ ಜೊತೆಗಿದೆ? ಎಲ್ಲಿದೆ ಅಂತ ನಮಗೂ ಗೊತ್ತಿದೆ ಎಂದರು.