ಕಳೆದ ಜನವರಿ 16ರಂದು ನಟ ಸೈಫ್ ಅಲಿ ಖಾನ್ ಮನೆಗೆ ದುಷ್ಕರ್ಮಿಯೋರ್ವ ದರೋಡೆಗೆ ಮುಂದಾಗಿದ್ದ. ಈ ವೇಳೆ ತಡೆಯಲು ಬಂದ ಸೈಫ್ ಅಲಿ ಖಾನ್ ರನ್ನು ಚಾಕುವಿನಿಂದ ಗಂಭೀರವಾಗಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ. ಇದೀಗ ಘಟನೆಯ ಬಳಿಕ ಮೊದಲ ಭಾರಿಗೆ ಸಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಭಾಗಿಯಾಗಿ ಅಂದು ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳ್ಳನೊಂದಿಗೆ ನಡೆದ ಜಗಳದಲ್ಲಿ ಸೈಫ್ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಬಟ್ಟೆಗಳು ರಕ್ತದಿಂದ ಕೂಡಿದ್ದವು. ಕಳ್ಳನನ್ನು ಕೋಣೆಯಲ್ಲಿ ಕೂಡಿಹಾಕಿದ ನಂತರ, ಸೈಫ್, ಕರೀನಾ ಮತ್ತು ಅವರ ಇಬ್ಬರು ಮಕ್ಕಳು ಕಟ್ಟಡದ ಕೆಳಕ್ಕೆ ಹೋದರು. ಸೈಫ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ರಿಕ್ಷಾ ಅಥವಾ ಟ್ಯಾಕ್ಸಿಗಾಗಿ ಕರೀನಾ ಬೀದಿಯಲ್ಲಿ ಕೂಗುತ್ತಿದ್ದರು. ಈ ಘಟನೆಯ ಬಗ್ಗೆ ಸೈಫ್ ಮಾತನಾಡಿದ್ದಾರೆ.
‘ಕರೀನಾ ತುಂಬಾ ಹೆದರುತ್ತಿದ್ದಳು. ಅವಳು ಸಹಾಯಕ್ಕಾಗಿ ಬೀದಿಯಲ್ಲಿ ಕಿರುಚುತ್ತಿದ್ದಳು. ಅವಳು, ನೀನು ಆಸ್ಪತ್ರೆಗೆ ಹೋಗು, ನಾನು ಸಹೋದರಿ ಕರಿಷ್ಮಾಳ ಮನೆಗೆ ಹೋಗುತ್ತೇನೆ ಎಂದಳು. ಅವಳು ಭಯದಿಂದ ಎಲ್ಲರನ್ನೂ ಕರೆಯುತ್ತಿದ್ದಳು, ಆದರೆ ಯಾರೂ ಎಚ್ಚರವಾಗಿರಲಿಲ್ಲ. ನಾನು ಚೆನ್ನಾಗಿದ್ದೇನೆ, ನಾನು ಸಾಯುವುದಿಲ್ಲ ಎಂದು ಹೇಳುವ ಮೂಲಕ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಆಗ ತೈಮೂರ್ ಆತಂಕದಿಂದ ನನ್ನತ್ತ ನೋಡಿ, ‘ನೀವು ಸಾಯುತ್ತೀರಾ?’ ಎಂದು ಕೇಳಿದ. ನಾನು ಅವನಿಗೆ ‘ಇಲ್ಲ’ ಎಂದೆ’ ಎಂದು ಸೈಫ್ ಅಲಿ ಖಾನ್ ಅಂದಿನ ಘಟನೆ ಬಗ್ಗೆ ವಿವರಿಸಿದ್ದಾರೆ.
ದಾಳಿಯ ನಂತರ ಸೈಫ್ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗಿದ್ದು ಅವರ ಹಿರಿಯ ಮಗ ಇಬ್ರಾಹಿಂ ಎಂಬ ಮಾತು ಆರಂಭದಲ್ಲಿ ಕೇಳಿಬಂದಿತ್ತು. ಆದರೆ, ನಂತರ, ಲೀಲಾವತಿ ಆಸ್ಪತ್ರೆಯ ವೈದ್ಯರು ಸೈಫ್ ಜೊತೆ ಆಸ್ಪತ್ರೆಗೆ ಬಂದಿದ್ದು ಎಂಟು ವರ್ಷದ ಮಗ ತೈಮೂರ್, ಇಬ್ರಾಹಿಂ ಅಲ್ಲ ಎಂದು ಸ್ಪಷ್ಟಪಡಿಸಿದರು. ಇಷ್ಟು ಚಿಕ್ಕ ಮಗುವಿನೊಂದಿಗೆ ಆಸ್ಪತ್ರೆಗೆ ಏಕೆ ಹೋದರು ಎಂದು ಕೇಳಿದಾಗ, ಸೈಫ್, ‘ಅವನು ಸಂಪೂರ್ಣವಾಗಿ ಶಾಂತನಾಗಿದ್ದನು’ ಎಂದು ಹೇಳಿದರು.
‘ನಾನು ನಿಮ್ಮ ಜೊತೆ ಬರುತ್ತೇನೆ ಎಂದು ತೈಮೂರ್ ಹೇಳಿದೆ. ಆ ಸಮಯದಲ್ಲಿ, ನನಗೆ ಏನಾದರೂ ಸಂಭವಿಸಿದರೆ, ಅವನ ಮುಖವನ್ನು ನೋಡುವುದೇ ನನಗೆ ತುಂಬಾ ಧೈರ್ಯ ನೀಡುತ್ತದೆ ಎಂದು ನನಗನ್ನಿಸಿತು. ನನಗೆ ಒಬ್ಬಂಟಿಯಾಗಿ ಹೋಗಲು ಇಷ್ಟವಿರಲಿಲ್ಲ. ನನ್ನ ಹೆಂಡತಿ ತೈಮೂರ್ನನ್ನು ನನ್ನೊಂದಿಗೆ ಕಳುಹಿಸಿದಳು ಏಕೆಂದರೆ ಅವನು ನನಗಾಗಿ ಏನು ಮಾಡಬಲ್ಲನೆಂದು ಅವಳಿಗೆ ತಿಳಿದಿತ್ತು. ಬಹುಶಃ ಆ ಕ್ಷಣಕ್ಕೆ ಅದು ಸರಿ ಇರಲಿಲ್ಲ. ಆದರೆ ನನಗೆ ಒಳ್ಳೆಯದೆನಿಸಿತು. ನನಗೆ ಏನಾದರೂ ಒಳ್ಳೆಯದು ಅಥವಾ ಕೆಟ್ಟದು ಸಂಭವಿಸಿದರೂ ಸಹ, ಅವನು ನನ್ನ ಪಕ್ಕದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ಅವನಿಗೂ ನನ್ನನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಹಾಗಾಗಿ, ತೈಮೂರ್, ಹರಿ ಮತ್ತು ನಾನು ರಿಕ್ಷಾದಲ್ಲಿ ಆಸ್ಪತ್ರೆಗೆ ಹೋದೆವು’ ಎಂದು ಸೈಪ್ ಅಲಿ ಖಾನ್ ಹೇಳಿದ್ದಾರೆ.