2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ (World Cup) ಭಾರತ ಸೋತು ವಾರ ಕಳೆಯುವ ಮೊದಲೇ ರೋಹಿತ್ ಶರ್ಮಾ (Rohit Sharma) ಅವರ ನಿವೃತ್ತಿ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ರೋಹಿತ್ ನಿವೃತ್ತಿ ಬಗ್ಗೆ ಬಿಸಿಸಿಐ (BCCI) ಬಳಿ ಈಗಾಗಲೇ ಮಾತಾಡಿದ್ದಾರೆ ಎಂದು ವರದಿಯಾಗಿದೆ.
ಟೀಂ ಇಂಡಿಯಾದ ಉತ್ತಮ ಬ್ಯಾಟರ್ಗಳಲ್ಲಿ ಒಬ್ಬರಾದ ರೋಹಿತ್, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮುಂದುವರಿಯುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಟೀಂ ಇಂಡಿಯಾದ ಟಿ20 ತಂಡಕ್ಕೆ ಪರಿಗಣಿಸದೇ ಇದ್ದರೂ ಸಮಸ್ಯೆ ಇಲ್ಲ ಎಂದು ರೋಹಿತ್ ಹೇಳಿಕೊಂಡಿದ್ದಾಗಿ ವರದಿಯಾಗಿದೆ. 2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ 2023ರ ಏಷ್ಯಾ ಕಪ್ನಲ್ಲಿ ಮಾತ್ರ ಗೆಲುವು ಸಾಧಿಸಿದ್ದರು
ಸದ್ಯಕ್ಕೆ ರೋಹಿತ್ ಟೆಸ್ಟ್ ಕ್ರಿಕೆಟ್ ಕಡೆಗೆ ತಮ್ಮ ಗಮನ ನೀಡುವ ಸಾಧ್ಯತೆ ಹೆಚ್ಚಿದೆ. 3ನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಕೂಡ 2025ರಲ್ಲೇ ನಡೆಯಲಿದೆ. ಹೀಗಾಗಿ ತಂಡದಲ್ಲಿ ಇದ್ದು, ಭವಿಷ್ಯದ ಕ್ಯಾಪ್ಟನ್ನ ಬೆಳೆಸುವ ಜವಾಬ್ದಾರಿ ರೋಹಿತ್ ಮೇಲಿರಲಿದೆ. ರೋಹಿತ್ ಶರ್ಮಾ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಹೊಸ ನಾಯಕನ ಆಯ್ಕೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಈ ವಿಶ್ವಕಪ್ನಲ್ಲಿ ಬೌಲರ್ಗಳ ಸರಾಸರಿ ಬೌಲಿಂಗ್ ರ್ಯಾಂಕ್ನಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನೆದರ್ಲ್ಯಾಂಡ್ರ್ಸ್ ವಿರುದ್ಧ 1 ಓವರ್ ಎಸೆದು 7 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ 765 ರನ್ ಹೊಡೆದು ಮೊದಲ ಸ್ಥಾನ ಪಡೆದರೆ 597 ರನ್ ಹೊಡೆಯುವ ಮೂಲಕ ರೋಹಿತ್ ಶರ್ಮಾ ಎರಡನೇ ಸ್ಥಾನ ಪಡೆದಿದ್ದಾರೆ.