ರೋಹಿತ್ ಶರ್ಮಾ ಇನ್ಮುಂದೆ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ. ಐಸಿಸಿ ವಿಶ್ವಕಪ್ 2023ರ ಪಂದ್ಯ ಆರಂಭಕ್ಕೂ ಮುನ್ನವೇ ರೋಹಿತ್ ತಮ್ಮ ಭವಿಷ್ಯದ ಬಗ್ಗೆ ಚರ್ಚಿಸಿದ್ದರು ಎಂದು ಬಿಸಿಸಿಐ ಮೂಲ ಹೇಳಿದೆ.
ನವೆಂಬರ್ 2022 ರಲ್ಲಿ ಭಾರತ ಟಿ-20 ವಿಶ್ವಕಪ್ ಸೆಮಿಫೈನಲ್ ನಿರ್ಗಮನದ ನಂತರ ರೋಹಿತ್ ಒಂದೇ ಒಂದು ಪಂದ್ಯವನ್ನು ಕೂಡ ಆಡಿಲ್ಲ ಎಂಬುದು ಗಮನಾರ್ಹವಾಗಿದೆ. ಅಂದಿನಿಂದಲೂ ಟಿ-20ಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. 36 ವರ್ಷದ ರೋಹಿತ್ ಶರ್ಮಾ ಒಟ್ಟು 148 ಟಿ20 ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕಗಳೊಂದಿಗೆ ಸುಮಾರು 140 ಸ್ಟ್ರೈಕ್ ರೇಟ್ನಲ್ಲಿ 3,853 ರನ್ ಗಳಿಸಿದ್ದಾರೆ.
‘ಇದು ಹೊಸ ಬೆಳವಣಿಗೆಯಲ್ಲ. ರೋಹಿತ್ ಕಳೆದ ಒಂದು ವರ್ಷದಲ್ಲಿ ಏಕದಿನ ವಿಶ್ವಕಪ್ನತ್ತ ಹೆಚ್ಚು ಗಮನಹರಿಸಿದ್ದರಿಂದ ಯಾವುದೇ ಟಿ20ಐಗಳನ್ನು ಆಡಿಲ್ಲ. ಈ ನಿಟ್ಟಿನಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರೊಂದಿಗೆ ಅವರು ವ್ಯಾಪಕ ಚರ್ಚೆ ನಡೆಸಿದ್ದಾರೆ. ಅವರೇ ಸ್ವಯಂಪ್ರೇರಿತರಾಗಿ ಟಿ20ಯಿಂದ ದೂರ ಉಳಿಯಲು ಇದೀಗ ಮುಂದಾಗಿದ್ದಾರೆ. ಇದು ಸಂಪೂರ್ಣವಾಗಿ ರೋಹಿತ್ ಅವರ ಕರೆಯಾಗಿದೆ’ ಎಂದು ಅನಾಮಧೇಯತೆಯ ಷರತ್ತುಗಳ ಮೇರೆಗೆ ಬಿಸಿಸಿಐನ ಮೂಲವು ಮಾಹಿತಿ ಹಂಚಿಕೊಂಡಿದೆ.
ಇದೀಗ ಟಿ-20 ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ರೋಹಿತ್ ಶರ್ಮಾ ನಂತರ ಭಾರತಕ್ಕೆ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ನಾಲ್ಕು ಆರಂಭಿಕ ಆಟಗಾರರಿದ್ದಾರೆ. ಇವರೆಲ್ಲರೂ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಓಪನಿಂಗ್ ಸ್ಥಾನಕ್ಕೆ ತಾವು ಅರ್ಹರು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಈ ಎಲ್ಲಾ ಅಂಶವನ್ನು ಮುಂದಿಟ್ಟು ಬಿಸಿಸಿಐ ಮುಂದಿನ ದಿನಗಳಲ್ಲಿ ಯಾವ ರೀತಿಯ ನಿಲುವನ್ನು ಕೈಗೊಳ್ಳಲಿದೆ ಕಾದು ನೋಡಬೇಕು.