ಮನುಷ್ಯ ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ರೀತಿಯಾಗಿ ಎಐನ (Artificial Intelligence) ಜಾಲಕ್ಕೆ ಸಿಲಕಿದ್ದಾನೆ. ಈಗ ಎಐ (AI) ಬದುಕಿನ ಭಾಗವಾಗಿ ಹೋಗಿದೆ. ಉದಾಹರಣೆಗೆ ನಮ್ಮ ಆಸಕ್ತಿದಾಯಕ ವಿಚಾರಗಳೇ ನಮಗೆ ಇಂಟರ್ನೆಟ್ನಲ್ಲಿ ಲಭಿಸುತ್ತದೆ. ಯಾಕೆಂದರೆ ಕಾರಣ ಈ ಎಐ, ನಾವು ಗೂಗಲ್ ಅಥವಾ ಯೂಟ್ಯೂಬ್ನಲ್ಲಿ ನಮಗೆ ಬೇಕಾದ ಮಾಹಿತಿ ಹುಡುಕಿದಾಗ ಬೇರೆ ಏನನ್ನಾದರೂ ನೋಡುವಾಗಲೂ ಈ ಹಿಂದೆ ಹುಡುಕಿದ ವಿಚಾರಕ್ಕೆ ಸಂಬಂಧಿಸಿದ ಜಾಹಿರಾತುಗಳು, ಅದರ ವಿಧಗಳು ನಮಗೆ ಕಾಣಿಸುತ್ತವೆ.
ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ತಿಯವರು 1956ರಲ್ಲಿ ಮೊದಲ ಬಾರಿಗೆ ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪದವನ್ನು ಬಳಕೆ ಮಾಡುತ್ತಾರೆ. ನಂತರದ ಬೆಳವಣಿಗೆಯಲ್ಲಿ ಸಂಶೋಧನೆಗಳಿಂದ ಇಂದು ಎಐ ತಂತ್ರಜ್ಞಾನ ಜಗತ್ತಿಗೆ ಹಬ್ಬಿದೆ.
ಮನುಷ್ಯ ದೈಹಿಕ ಅಥವಾ ಬೌದ್ಧಿಕವಾಗಿ (Human Intelligence) ನಿರ್ವಹಿಸಬಹುದಾದ ಕೆಲಸವನ್ನು ತಂತ್ರಜ್ಞಾನ ಆಧಾರಿತವಾದ ಸಾಧನಗಳ ಮೂಲಕ ಮಾಡುವಂತಹ ಅಥವಾ ಮಾಡಿಸುವಂತಹ ಆವಿಷ್ಕಾರವನ್ನೇ ಕೃತಕ ಬುದ್ಧಿಮತ್ತೆ (Artificial Intelligence) ಎಂದು ಕರೆಯಬಹುದು. ಉದಾಹರಣೆಗೆ ಕ್ಯಾಲ್ಕೂಲೇಟರ್, ಕಂಪ್ಯೂಟರ್ (Computer), ರೋಬೋಟ್ ಇತ್ಯಾದಿ. ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಸುದ್ದಿ ಮನೆ ಹುಡುಗಿ ಮತ್ತೀತರರು ಇದೇ ಸಾಲಿಗೆ ಸೇರುತ್ತಾರೆ.
ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು
ಮಾನವ ದೋಷದಲ್ಲಿ ಕಡಿತ
ಕೃತಕ ಬುದ್ಧಿಮತ್ತೆಯ ಪ್ರಯೋಜನವೆಂದರೆ ಅದರಿಂದ ದೋಷಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ನಿಖರವಾದ ಕೆಲಸ ಸಾಧ್ಯವಿದೆ. ಉದಾಹರಣೆಗೆ ರೋಬೋಟಿಕ್ (Robots) ಸರ್ಜರಿ ವ್ಯವಸ್ಥೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿ ಗುರುತಿಸಲ್ಪಟ್ಟಿದೆ. ಇದರಿಂದ ಹಲವಾರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಾಧ್ಯವಾಗಿದೆ. ಹಾಗೂ ಮನುಷ್ಯ ಮಾಡಬಹುದಾದ ಅಜಾಗರೂಕತೆಯನ್ನು ಇದು ತಪ್ಪಿಸಲಿದೆ.
ಅಪಾಯಗಳಿಂದ ಪಾರು ಮಾಡುವ ಸಾಧನವಾಗಿ ಎಐ
ಬಾಂಬ್ ನಿಷ್ಕ್ರಿಯಗೊಳಿಸುವುದು, ಬಾಹ್ಯಾಕಾಶಕ್ಕೆ ಹೋಗುವುದು, ಸಾಗರಗಳ ಆಳವಾದ ಭಾಗಗಳನ್ನು ಅನ್ವೇಷಿಸುವ ಕಾರ್ಯದಲ್ಲಿ ರೋಬೋಟ್ ಬಳಕೆ ಮಾಡುವುದರಿಂದ ಸಂಶೋಧನೆ ಹಾಗೂ ರಕ್ಷಣಾ ಕಾರ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಪ್ಪಿಸಲು ಸಾಧ್ಯವಿದೆ.
ದಿನದ 24 ಗಂಟೆಗಳ ಕಾಲ ಲಭ್ಯತೆ
ಮನುಷ್ಯ ದಿನಕ್ಕೆ 5 ರಿಂದ 6 ಗಂಟೆಗಳ ಕಾಲ ಮಾತ್ರ ಉತ್ಸಾಹದಿಂದ ಕಾರ್ಯನಿರ್ವಹಿಸಬಲ್ಲ ಎಂಬ ಅನೇಕ ಅಧ್ಯಯನ ವರದಿಗಳಿವೆ. ಜೊತೆಗೆ ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ವಿರಾಮಗಳ ಅಗತ್ಯವಿದೆ. ಎಐ ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಬೇಸರದ ಪುನರಾವರ್ತಿತ ಕೆಲಸಗಳನ್ನು ಎಐನಿಂದ ಸರಳವಾಗಿ ಸಾಧಿಸಲು ಸಾಧ್ಯವಿದೆ.
ಡಿಜಿಟಲ್ ಸಹಾಯ
ಕೆಲವು ತಾಂತ್ರಿಕವಾಗಿ ಮುಂದುವರಿದ ಕಂಪನಿಗಳು ಡಿಜಿಟಲ್ ಸಹಾಯಕಗಳನ್ನು ಬಳಸಿಕೊಂಡು ಗ್ರಾಹಕರೊಂದಿಗೆ ಸಂವಹನ ನಡೆಸುತ್ತವೆ. ಕರೆ ಅಥವಾ ಸಂದೇಶಗಳಿಗೆ ಸೂಕ್ತ ಉತ್ತರವನ್ನು ನೀಡಲು ಇದು ಸಹಕಾರಿಯಾಗಿದೆ. ಅಲ್ಲದೇ ವೆಬ್ಸೈಟ್ಗಳಲ್ಲೂ ನಮಗೆ ಬೇಕಾದ ಮಾಹಿತಿಗಳನ್ನು ಹುಡುಕಿ ಪಡೆಯಬಹುದಾದ ವ್ಯವಸ್ಥೆ ಸಹ ಲಭ್ಯವಿದೆ.
ಹೊಸ ಆವಿಷ್ಕಾರಗಳು
ಪ್ರಾಯೋಗಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಎಂಬುದು ಹಲವಾರು ಆವಿಷ್ಕಾರಗಳ ಹಿಂದಿನ ಶಕ್ತಿಯಾಗಿದೆ. ಅದು ಬಹುಪಾಲು ಸವಾಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗಿದೆ. ವೈದ್ಯಕೀಯ ಲೋಕದಲ್ಲಿ ಸವಾಲಾಗಿರುವ ಎಷ್ಟೋ ಖಾಯಿಲೆಗಳನ್ನು ಪತ್ತೆ ಹಚ್ಚಲು ಎಐ ಬಹಳಷ್ಟು ಸಹಕಾರಿಯಾಗಿದೆ. ಉದಾಹರಣೆಗೆ ಇತ್ತೀಚಿನ ಬೆಳವಣಿಗೆಯಲ್ಲಿ ವೈದ್ಯರಿಗೆ ಮೊದಲ ಹಂತದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ನ್ನು ಪತ್ತೆಹಚ್ಚಲು ಎಐನಿಂದ ಸಾಧ್ಯವಾಗಿದೆ.
ಸ್ವಯಂ-ಚಾಲಿತ ಕಾರುಗಳು, ಇದು ಮಾನವ ಹಸ್ತಕ್ಷೇಪವಿಲ್ಲದೆ ಕ್ಯಾಮೆರಾ ಹಾಗೂ ತಂತ್ರಜ್ಞಾನದ ಮೂಲಕ ಸಂಚರಿಸುವ ಶಕ್ತಿ ಹೊಂದಿದೆ. ಇದರಿಂದ ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಿಕಲಾಂಗರಿಗೆ ಅನುಕೂಲವಾಗಲಿದೆ. ಅಲ್ಲದೇ ವಾಹನ ಚಾಲನೆಯಲ್ಲಿ ಎಐ ನಿಕಯಂತ್ರಿತ ವ್ಯವಸ್ಥೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.
ಪಕ್ಷಪಾತವಿಲ್ಲದ ನಿರ್ಧಾರಗಳು
ಕೃತಕ ಬುದ್ಧಿಮತ್ತೆ ಯಾವುದೇ ಪಕ್ಷಪಾತದ ದೃಷ್ಟಿಕೋನಗಳನ್ನು ಹೊಂದಿಲ್ಲ. ಇದರಿಂದ ಹೆಚ್ಚು ನಿಖರವಾದ ನಿರ್ಧಾರವನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ. ಈ ಸಾಮರ್ಥ್ಯದಿಂದ ನೇಮಕಾತಿಯಂತಹ ಪ್ರಕ್ರಿಯೆಯಲ್ಲಿ ಪಕ್ಷಪಾತವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ದೈನಂದಿನ ಅಪ್ಲಿಕೇಶನ್ಗಳು
ಇಂದು, ನಮ್ಮ ದೈನಂದಿನ ಜೀವನವು ಮೊಬೈಲ್ ಸಾಧನಗಳು ಮತ್ತು ಇಂಟರ್ನೆಟ್ನ್ನು ಸಂಪೂರ್ಣವಾಗಿ ಅವಲಂಬಿಸಲಾಗಿದೆ. ಇದರಲ್ಲಿ ಒಂದು ಕಡೆಯಿಂದ ಇನ್ನೊಂದೆಡೆಗೆ ಸಂಚರಿಸಲು ಮಾರ್ಗಗಳನ್ನು ಹುಡುಕಲು ಹಾಗೂ ಹವಾಮಾನದ ವೈಪರಿತ್ಯಗಳನ್ನು ಲೆಕ್ಕಾಚಾರಹಾಕಲು ಈ ಸಾಧನಗಳ ಬಳಕೆ ಮಾಡಲಾಗುತ್ತದೆ. ಇದರಿಂದ ನಮ್ಮ ಕೆಲಸಗಳು ಸರಳವಾಗುತ್ತವೆ.
ಅಪಾಯಕಾರಿ ಕೆಲಸಗಳಲ್ಲಿ ಎಐಗಳ ಬಳಕೆ
ಗಣಿಗಾರಿಕೆ ಹಾಗೂ ವಿಕಿರಣಗಳನ್ನು ಹೊರ ಹೊಮ್ಮಿಸುವಂತಹ ಜಾಗಗಳಲ್ಲಿ ಎಐಗಳ ಬಳಕೆಯಿಂದ ಮನುಷ್ಯನಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಭದ್ರತೆ ಹಾಗೂ ಸೇನೆಯಲ್ಲಿ ಎಐಗಳ ಬಳಕೆ ಪರಿಣಾಮಕಾರಿಯಾಗಿ ಸಹಕಾರಿಯಾಗಿದೆ.
ವೈದ್ಯಕೀಯ ಅಪ್ಲಿಕೇಶನ್ಗಳು
ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಹಿಡಿದು ಔಷಧ ಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಗಳವರೆಗಿನ ರೋಗಿಗಳ ಡೇಟಾವನ್ನು ವಿಶ್ಲೇಷಿಸಲು ಎಐ ಸಹಕಾರಿಯಾಗಿದೆ. ಅಲ್ಲದೇ ಸಂಭಾವ್ಯ ಆರೋಗ್ಯ ಅಪಾಯಗಳನ್ನು ಗುರುತಿಸಿ ಮುನ್ಸೂಚನೆ ನೀಡುವಂತಹ ಸಾಧನವಾಗಿ ಎಐ ಬಳಕೆಯಾಗುತ್ತಿದೆ.
ಪ್ರವೃತ್ತಿಗಳನ್ನು ಗುರುತಿಸುವಿಕೆ
ಹೆಚ್ಚಿನ ಪ್ರಮಾಣದ ಡೇಟಾವನ್ನು ವಿಶ್ಲೇಷಿಸುವ ಮತ್ತು ಪ್ರವೃತ್ತಿಗಳನ್ನು ಗುರುತಿಸುವ ಸಾಮರ್ಥ್ಯದೊಂದಿಗೆ ಗ್ರಾಹಕರ ನಡವಳಿಕೆ, ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಇತರೆ ಪ್ರಮುಖ ಅಂಶಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಎಐ ವ್ಯಾಪರ ಸಂಬಂಧ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ಇದರಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವ್ಯಾಪಾರದ ಫಲಿತಾಂಶಗಳನ್ನು ಸುಧಾರಿಸಲು ಸಹಕಾರಿಯಾಗುತ್ತದೆ.
ಅನಾನುಕೂಲಗಳೇನು?
ಹೆಚ್ಚಿನ ವೆಚ್ಚ
ಮಾನವ ಬುದ್ಧಿಮತ್ತೆಯನ್ನು ಅನುಕರಿಸುವ ಯಂತ್ರಗಳನ್ನು ರಚಿಸುವುದು ಸಣ್ಣ ಸಾಧನೆಯಲ್ಲ. ಇದಕ್ಕೆ ಸಾಕಷ್ಟು ಸಮಯ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ. ದೊಡ್ಡ ಪ್ರಮಾಣದ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ. ಈ ರ್ಸಾಧನಗಳು ನವೀಕೃತವಾಗಿರಲು ಮತ್ತು ಇತ್ತೀಚಿನ ಅವಶ್ಯಕತೆಗಳನ್ನು ಪೂರೈಸಲು ಅಪ್ಡೇಟ್ ಆಗಲು ಸಾಕಷ್ಟು ಹಣದ ಖರ್ಚಾಗಲಿದೆ.
ಸೃಜನಶೀಲತೆ ಇಲ್ಲ
ಎಐ ತನ್ನ ಮಿತಿಯೊಳಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಅದರಾಚೆ ಅದು ಯೋಚಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಒದಗಿಸಲಾದ ಡೇಟಾ ಮತ್ತು ಸಂಗತಿಗಳನ್ನು ಮಾತ್ರ ಅದು ಒಳಗೊಂಡಿರುತ್ತದೆ.
- ನಿರುದ್ಯೋಗ
ಕೃತಕ ಬುದ್ಧಿಮತ್ತೆಯ ರೋಬೋಟ್ಗಳು ಮನುಷ್ಯನ ಕೆಲಸ ಕಸಿಯುವ ಸಾಧ್ಯತೆ ಎದ್ದು ಕಾಣುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆ ತಲೆದೂರುವ ಸಾಧ್ಯತೆಗಳು ಹೆಚ್ಚಾಗಿದೆ. ಉದಾಹರಣೆಗೆ ಜಪಾನ್ನಂತಹ ಕೆಲವು ಹೆಚ್ಚು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲಿ ಕೈಗಾರಿಕಾ ಕೆಲಸಗಳಲ್ಲಿ ಮಾನವ ಸಂಪನ್ಮೂಲಗಳ ಬದಲು ರೋಬೋಟ್ಗಳನ್ನು ಬಳಸಲಾಗುತ್ತದೆ. ಇದು ನಿರುದ್ಯೋಗಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿವೆ. - ಮನುಷ್ಯರ ಬೌದ್ಧಿಕ ಮಟ್ಟ ಕುಂಠಿತಗೊಳ್ಳುವ ಸಾಧ್ಯತೆ
ಎಐ ಅಪ್ಲಿಕೇಶನ್ಗಳ ಹೆಚ್ಚಿನ ಬಳಕೆ ಮೆದುಳಿಗೆ ಕೆಲಸ ಕಡಿಮೆ ಮಾಡುತ್ತವೆ. ಮನುಷ್ಯನ ಬೌದ್ಧಿಕ ಸಾಮರ್ಥ್ಯದಲ್ಲಿ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. - ನೈತಿಕತೆ ಇಲ್ಲ
ನೈತಿಕತೆಯು ಪ್ರಮುಖ ಮಾನವ ಲಕ್ಷಣವಾಗಿದೆ. ಆದರೆ ಇದನ್ನೂ ಎಐಗೆ ಅಳವಡಿಸಲು ಕಷ್ಟವಾಗುತ್ತದೆ. ಎಐ ಮುಂದೊಂದು ದಿನ ಅನಿಯಂತ್ರಿತವಾಗಿ ಬೆಳೆಯುತ್ತದೆ. ಅಂತಿಮವಾಗಿ ಮಾನವೀಯತೆಯನ್ನು ಅಳಿಸಿಹಾಕುತ್ತದೆ ಎಂಬ ಹಲವಾರು ಕಳವಳಗಳನ್ನು ಹುಟ್ಟು ಹಾಕಿದ್ದಾರೆ. ಯುದ್ಧ ಹಾಗೂ ಸೇನೆಯ ಕಾರ್ಯಾಚರಣೆಗಳಲ್ಲಿ ಎಐಗಳ ಬಳಕೆ ಮಹಾ ವಿನಾಶಕ್ಕೆ ಕಾರಣವಾಗಬಹುದು. - ಭಾವರಹಿತ
ಕಂಪ್ಯೂಟರ್ಗಳು ಹಾಗೂ ಎಐ ಆಧಾರಿತ ಯಂತ್ರಗಳು ಭಾವನೆಗಳನ್ನು ಹೊಂದಿಲ್ಲ. ಆದರೆ ಇತ್ತೀಚೆಗೆ ಮಾನವನ ಸಂಗಾತಿಯ ಸ್ಥಾನವನ್ನು ಆಕ್ರಮಿಸುವ ಮಟ್ಟಕ್ಕೆ ಇವು ಬೆಳೆದು ನಿಂತಿವೆ.