ನವದೆಹಲಿ: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಹಂಬಲದಲ್ಲಿ ಅಂತಿಮ ಹಂತದಲ್ಲಿ ಎಡವಿತು. ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಫೈನಲ್ನಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ಗಳ ಜಯ ಸಾಧಿಸಿತು. ಫೈನಲ್ನಲ್ಲಿ ಭಾರತದ ಸೋಲಿಗೆ ಕಾರಣವಾದ ಐದು ತಿರುವುಗಳೇನು ಎಂಬುದನ್ನು ನೋಡೋಣ.
ಮಿಂಚುವಲ್ಲಿ ವಿಫಲರಾದ ಗಿಲ್
ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದ್ದರು. ಆದರೆ ಅವರಿಗೆ ಜೊತೆಯಾಗಿ ನಿಲ್ಲುವಲ್ಲಿ ಶುಭಮನ್ ಗಿಲ್ ಎಡವಿದರು. ಇದರಿಂದ ಭಾರತಕ್ಕೆ ಉತ್ತಮ ಆರಂಭ ಒದಗಿಸಲು ಸಾಧ್ಯವಾಗಲಿಲ್ಲ. ಕೇವಲ 4 ರನ್ ಗಳಿಸಿ ಕ್ಯಾಚ್ ನೀಡಿ ಗಿಲ್ ಪೆವಿಲಿಯನ್ ಸೇರಿದರು. ತಂತ್ರಗಾರಿಕೆ ಮೂಲಕ ಭಾರತದ ಬ್ಯಾಟರ್ಗಳು ಹೆಚ್ಚು ರನ್ ಹೊಡೆಯದಂತೆ ಕಟ್ಟಿಹಾಕುವಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಯಶಸ್ವಿಯಾದರು.
ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಆಟ
ಐದನೇ ಓವರ್ನಲ್ಲಿ ಶುಭಮನ್ ಗಿಲ್ ಔಟಾದ ನಂತರ, ರೋಹಿತ್ ಶರ್ಮಾ ಆಕ್ರಮಣಕಾರಿ ಸ್ಟ್ರೋಕ್ಗಳನ್ನು ಆಡುವುದನ್ನು ಮುಂದುವರೆಸಿದರು. 10 ನೇ ಓವರ್ನಲ್ಲಿ ಔಟಾಗುವ ಮೊದಲು 31 ಎಸೆತಗಳಲ್ಲಿ 47 ರನ್ ಗಳಿಸಿದರು. ಶರ್ಮಾ ಔಟಾದ ನಂತರ ಭಾರತ ತಂಡವು ಪ್ರಮುಖ ಆಟಗಾರರನ್ನು ಕಳೆದುಕೊಂಡಿತು. ಶ್ರೇಯಸ್ ಅಯ್ಯರ್ 4 ಗಳಿಸಿ ಔಟಾದರು. ನಂತರ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ 67 ರನ್ಗಳ ಜೊತೆಯಾಟ ನೀಡಿದರು. ಈ ಜೋಡಿ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯಲ್ಲಿ ರನ್ ದಾಖಲಾಯಿತು. 11 ರಿಂದ 20 ಓವರ್ಗಳ ಹಂತದಲ್ಲಿ ಭಾರತ ಒಂದು ವಿಕೆಟ್ ನಷ್ಟಕ್ಕೆ ಕೇವಲ 35 ರನ್ ಗಳಿಸಲಷ್ಟೇ ಶಕ್ತವಾಯಿತು. 21 ರಿಂದ 30 ಓವರ್ಗಳ ಹಂತದಲ್ಲಿ ಭಾರತ ಒಂದು ವಿಕೆಟ್ ನಷ್ಟಕ್ಕೆ 37 ರನ್ ಅಷ್ಟೇ ಗಳಿಸಿತು. ಒಟ್ಟಾರೆ ಇಡೀ ಇನಿಂಗ್ಸ್ನಲ್ಲಿ ಭಾರತ ಕೇವಲ 13 ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಗಳಿಸಿತು.
ಮಂಕಾದ ಸೂರ್ಯ
ಭಾರತದ ಬ್ಯಾಟ್ಸ್ಮನ್ಗಳು ಸ್ಕೋರ್ ಮಾಡಲು ಹೆಣಗಾಡಿದರು. ಒಂದು ಹಂತದಲ್ಲಿ 148/4 ಆಗಿತ್ತು. ವಿರಾಟ್ ಕೊಹ್ಲಿ ಕೇವಲ 63 ಎಸೆತಗಳಲ್ಲಿ 54 ರನ್ ಗಳಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಜೊತೆಗೂಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೂ, ಹಲವರಿಗೆ ಆಶ್ಚರ್ಯವಾಗುವಂತೆ ರವೀಂದ್ರ ಜಡೇಜಾ ಕ್ರೀಸ್ ಪಡೆದರು. ಆಲ್ ರೌಂಡರ್ ಭಾರತದ ರನ್ ವೇಗವನ್ನು ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ಜಡೇಜಾ 22 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಸೂರ್ಯಕುಮಾರ್ ಯಾದವ್ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಕಳುಹಿಸದೆ ಭಾರತವು ಅವಕಾಶವನ್ನು ಕಳೆದುಕೊಂಡಿದೆ. ಮುಂಬೈ ಬ್ಯಾಟರ್ ಮೊದಲು ಬಂದು ಅವರ ವಿಶಿಷ್ಟ ಶೈಲಿಯಲ್ಲಿ ಆಡಿದ್ದರೆ, ಭಾರತವು ಹೆಚ್ಚು ಅಸಾಧಾರಣ ಸ್ಕೋರ್ ಸಾಧಿಸಬಹುದಿತ್ತು.
ಕೈಕೊಟ್ಟ ಬೌಲರ್ಗಳು
ಭಾರತ ತಂಡ ಫೈನಲ್ ಪ್ರವೇಶಿಸಲು ಬೌಲರ್ಗಳ ಪಾತ್ರ ಗಮನಾರ್ಹವಾಗಿತ್ತು. ಫೈನಲ್ ಪಂದ್ಯದಲ್ಲೂ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಪೇಸ್ ಸಂಯೋಜನೆಯು ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸುವಲ್ಲಿ ಸಹಕಾರಿಯಾಗಬಹುದಿತ್ತು. ಆದರೆ, ನಿರ್ಣಾಯಕ ದಿನದಂದು ರೋಹಿತ್ ಶರ್ಮಾ ಅವರು ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಬೌಲಿಂಗ್ ತೆರೆಯಲು ನಿರ್ಧರಿಸಿದರು. ಆರಂಭಿಕ ಹಂತದಲ್ಲಿ ಇದು ಸಹಕಾರಿಯಾಗಿತ್ತು. 43 ರನ್ಗಳಿಗೆ ಭಾರತ 3 ವಿಕೆಟ್ ಕಬಳಿಸಿತ್ತು. ಆದರೆ ಮುಂದೆ ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ. ಈ ಬದಲಾವಣೆಯಿಂದಾಗಿ ಸಿರಾಜ್ ಬೌಲಿಂಗ್ ಪರಿಣಾಮಕಾರಿಯಾಗಿ ಫಲಿಸಲಿಲ್ಲ. ಅಷ್ಟೇ ಅಲ್ಲದೇ ಸ್ಪಿನ್ ಬೌಲಿಂಗ್ ಸಹ ಸಹಕಾರಿಯಾಗಲಿಲ್ಲ.