ಬೆಂಗಳೂರು: ಈ ಹಿಂದೆ ಅಧಿಕಾರಕ್ಕಾಗಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ (Congress) ಪಕ್ಷದವರಿಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿದಿಲ್ಲ ಎಂದು ಬಿಜೆಪಿ (BJP) ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ (CT Ravi) ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿಯವರ ಕುರಿತು ಅನಗತ್ಯ ಟೀಕೆ ಮಾಡುವ ಕಾಂಗ್ರೆಸ್ಸಿಗರು ಪ್ರಧಾನಿಯವರನ್ನು ಸರ್ವಾಧಿಕಾರಿ ಎನ್ನುತ್ತಿದ್ದಾರೆ. ಡಿ.ಕೆ.ಸುರೇಶ್ (DK Suresh) ಮತ್ತು ಇತರ ಕಾಂಗ್ರೆಸ್ಸಿಗರಿಗೆ ನೈತಿಕತೆ ಎಲ್ಲಿದೆ? ಅವರು ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು
ತುರ್ತು ಪರಿಸ್ಥಿತಿ ಹೇರಿ, ಕಮಿಟಿ ಪ್ರವಾಸಕ್ಕೆ ಬಂದ ಸಂಸದರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಕರ್ನಾಟಕದ ಜೈಲಿನಲ್ಲಿ ಎಲ್ಕೆ ಅಡ್ವಾಣಿ, ವಾಜಪೇಯಿ ಇವರೆಲ್ಲರೂ ಇದ್ದರು. ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದು ಮಾಡಿದ್ದನ್ನೇ ಕಾರಣ ಮಾಡಿ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ಪ್ರಶ್ನೆಗೆ ಉತ್ತರ ನೀಡಿದರು. ಅವರು ಮೇಲ್ಮನವಿ ಸಲ್ಲಿಸದೆ ಅಧಿಕಾರದಲ್ಲಿ ಉಳಿದುಕೊಳ್ಳಲು ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದರು ಎಂದು ವಿವರಿಸಿದರು.