ಬೆಂಗಳೂರು: ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳು, ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 26 ರಂದು 14 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ ಮೇ 07 ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಫಲಿತಾಂಶ ಜೂನ್ 04 ರಂದು ಬರಲಿದೆ.
ರಾಜ್ಯದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದ್ದು, ಚುನಾವಣೆಗೆ ಅಧಿಸೂಚನೆ ಮಾ.28ಕ್ಕೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏ.4 ಇರಲಿದೆ. ನಾಮಪತ್ರ ಹಿಂಪಡೆಯುವ ಕೊನೆ ದಿನ ಏ.8 ಇರಲಿದೆ.
- ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ
- ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ
- ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ
- ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ
- ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ
ಉಡುಪಿ – ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್ಸಿ) ಸೇರಿ ಒಟ್ಟು 14 ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯಲಿದೆ.
ಇನ್ನು, ಎರಡನೇ ಹಂತದ ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಏಪ್ರಿಲ್ 12 ರಂದು ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿರುತ್ತದೆ. ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ ನಡೆದರೆ, ನಾಮಪತ್ರ ವಾಪಸ್ ತೆಗೆದುಕೊಳ್ಳಲು ಏಪ್ರಿಲ್ 22 ಕೊನೆಯ ದಿನವಾಗಿರುತ್ತದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ (ಎಸ್ಸಿ), ಗುಲ್ಬರ್ಗಾ (ಎಸ್ಸಿ), ರಾಯಚೂರು (ಎಸ್ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಸೇರಿ ಒಟ್ಟು 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ದೇಶದಲ್ಲಿ ಯಾವ್ಯಾವ ಹಂತದಲ್ಲಿ ಚುನಾವಣೆ..?
- ಮೊದಲ ಹಂತದ ಚುನಾವಣೆ ಏಪ್ರಿಲ್ 19ಕ್ಕೆ ನಡೆಯಲಿದೆ
- ಎರಡನೇ ಹಂತದ ಚುನಾವಣೆ ಏಪ್ರಿಲ್ 26ಕ್ಕೆ ನಡೆಯಲಿದೆ
- ಮೂರನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ
- ನಾಲ್ಕನೇ ಹಂತದ ಚುನಾವಣೆ ಮೇ 13 ರಂದು ನಡೆಯಲಿದೆ
- ಐದನೇ ಹಂತದ ಚುನಾವಣೆ ಮೇ 20 ರಂದು ನಡೆಯಲಿದೆ
- ಆರನೇ ಹಂತದ ಚುನಾವಣೆ ಮೇ 25 ರಂದು ನಡೆಯಲಿದೆ
- ಏಳನೇ ಹಂತದ ಚುನಾವಣೆ ಜೂನ್ 1 ರಂದು ನಡೆಯಲಿದೆ
ಒಟ್ಟು 97 ಕೋಟಿ ಮತದಾರರಿದ್ದು, 10.5 ಲಕ್ಷ ಮತದಾನ ಕೇಂದ್ರಗಳನ್ನು ತೆರೆಯಲಾಗುತ್ತದೆ. 49.9 ಕೋಟಿ ಪುರುಷ, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48,000 ತೃತಿಯ ಲಿಂಗಿಗಳಿದ್ದಾರೆ. 19.74 ಕೋಟಿ ಯುವ ಮತದಾರರಿದ್ದರೆ 1.8 ಕೋಟಿ ಮೊದಲ ಸಲ ಮತದಾನ ಮಾಡುವ ಯುವ ಮತದಾರರಿದ್ದಾರೆ.ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಹೊಸ ಸರ್ಕಾರ ರಚನೆಯಾಗಬೇಕಿದೆ.