ಅಯ್ಯಪ್ಪ ದೇವರು ಜೀವಿಸಿದ ಶಬರಿಮಲೆಯಲ್ಲಿ ಅಯ್ಯಪ್ಪ ದೇವರ ಮಂದಿರವಿದೆ. ಇದು ವಿಶ್ವದ ಅತ್ಯಂತ ದೊಡ್ಡ ಯಾತ್ರೆಯ ಸ್ಥಳವಾಗಿದೆ ಮತ್ತು ಭಕ್ತಿಭಾವದಿಂದ ಅಯ್ಯಪ್ಪ ದೇವರನ್ನು ಪೂಜಿಸಿದರೆ ಭಕ್ತರು ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎಂದು ನಂಬಲಾಗಿದೆ. ಹೌದು ವಿಶ್ವ ವಿಖ್ಯಾತ, ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯವೇ ಒಂದು ವಿಸ್ಮಯ. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ದೀನವಾಗಿ ಕೂಗುತ್ತ ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಾಣಲು ಇಲ್ಲಿಗೆ ಭಕ್ತರು ಒಂದು ಹೊತ್ತಿನ ಊಟ, ತಣ್ಣೀರು ಸ್ನಾನ, ಮಂಡಲ ವ್ರತ.. ಹೀಗೆ ಶ್ರದ್ಧಾ ಭಕ್ತಿಯಿಂದ ಮಡಿ ಮೈಲಿಗೆಯಲ್ಲಿ ಮಾಲೆ ಹಾಕಿ ಬರುತ್ತಾರೆ. ಆದ್ರೆ ಈ ದೇವಸ್ಥಾನಕ್ಕೆ ಹೆಣ್ಣು ಮಕ್ಕಳಿಗೆ ಪ್ರವೇಶವಿಲ್ಲ. ಬನ್ನಿ ಈ ದೇವಾಲಯದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿಯಿರಿ.
ಹರಿಹರ ಸುತ ಅಯ್ಯಪ್ಪ
ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆಲೆ ನಿಂತಿರುವ ಅಯ್ಯಪ್ಪ ಸ್ವಾಮಿ ತನ್ನ ಅಪರೂಪದ ಮಹಾ ಪವಾಡದಿಂದ ಜಗತ್ ಪ್ರಸಿದ್ಧ. ಧಾರ್ಮಿಕ ದಂತಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಭೋಲೇನಾಥ್ ಶಿವನು, ಭಗವಾನ್ ವಿಷ್ಣುವಿನ ಮೋಹಿನಿ ರೂಪದಿಂದ ಆಕರ್ಷಿತರಾಗುತ್ತಾರೆ. ಈ ಕಾರಣದಿಂದಾಗಿ, ಹರಿಹರನ ಮಿಲನದ ಸಂಕೇತವಾಗಿ ಒಂದು ಮಗು ಜನಿಸಿತು. ಆ ಮಗುವನ್ನು ಪಂಪಾ ನದಿಯ ತೀರದಲ್ಲಿ ಬಿಡಲಾಗುತ್ತದೆ. ಈ ಸಮಯದಲ್ಲಿ, ರಾಜ ರಾಜಶೇಖರ ಅವರನ್ನು 12 ವರ್ಷಗಳ ಕಾಲ ಬೆಳೆಸಿದರು. ಈ ಮಗುವೇ ನಂತರ ಅಯ್ಯಪ್ಪ ಸ್ವಾಮಿ ಎಂದು ಕರೆಯಲ್ಪಟ್ಟರು.
ಮಹಿಷಿ ಪಡೆದ ವರ:
ಮಹಿಷಾಸುರನ ವಧೆಯ ನಂತರ ಮಹಿಷಾಸುರನ ಸೋದರಿಯಾದ ಮಹಿಷಿಯು ತನ್ನ ಸಹೋದರನ ಕೊಲೆಗೆ ಪ್ರತಿಕಾರವನ್ನು ಪಡೆದುಕೊಳ್ಳಲು ದೀರ್ಘಕಾಲ ತಪಸ್ಸು ಮಾಡಿದ ಆಕೆ ಬ್ರಹ್ಮನನ್ನು ಒಲಿಸಿಕೊಳ್ಳುತ್ತಾಳೆ. ಶಿವ ಮತ್ತು ವಿಷ್ಣುವಿನ ಮಗನನ್ನು ಹೊರತುಪಡಿಸಿ ಯಾರಿಂದಲೂ ತನಗೆ ಸಾವು ಬರಬಾರದೆಂಬ ವರವನ್ನು ಪಡೆಯುತ್ತಾಳೆ. ಪುರುಷರಿಬ್ಬರು ಮಗುವನ್ನು ಪಡೆಯಲು ಸಾಧ್ಯವಿಲ್ಲವೆಂದು ಭಾವಿಸಿದ ಮಹಿಷಿ ತಾನು ಅಮರಳೆಂದು ಭಾವಿಸುತ್ತಾಳೆ.
ಮಹಿಷಿಯ ಕಿರುಕುಳ:
ಆಕೆ ಭೂಮಿಯಲ್ಲಿ, ಸ್ವರ್ಗದಲ್ಲಿ ಎಲ್ಲರಿಗೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾಳೆ. ದಿಕ್ಕು ತೋಚದ ದೇವತೆಗಳು ವಿಷ್ಣುವಿನ ಬಳಿ ಬಂದು ಮಹಿಷಿಯಿಂದ ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ. ಮಹಿಷಿ ಪಡೆದ ವರವನ್ನು ಅರ್ಥೈಸಿಕೊಂಡ ವಿಷ್ಣು ಹಿಂದೆ ಅಸುರರಿಂದ ಅಮೃತವನ್ನು ಅಪಹರಿಸಿ ದೇವತೆಗಳಿಗೆ ನೀಡುವುದಕ್ಕಾಗಿ ತಾನು ತಾಳಿದ್ದ ಮೋಹಿನಿಯ ರೂಪವನ್ನು ಈಗ ಮತ್ತೊಮ್ಮೆ ತಾಳಿದನು. ಮೋಹಿನಿಯಾಗಿ ಶಿವನೊಂದಿಗೆ ಕೂಡಿ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾರೆ. ಆ ಮಗುವನ್ನು ಸಂತಾನವಿಲ್ಲದೆ ದುಃಖಿತನಾಗಿದ್ದ, ಶಿವಭಕ್ತನೂ ಆದ, ಪಂದಳ ರಾಜನಿಗೆ ಮತ್ತು ಆಕೆಯ ಪತ್ನಿ ರಾಣಿಗೆ ನೀಡಲು ನಿರ್ಧರಿಸುತ್ತಾರೆ.
ಮಣಿಕಂಠನಾದ ಅಯ್ಯಪ್ಪ:
ಅಯ್ಯಪ್ಪ ದೇವರು ಹುಟ್ಟಿದ ಬಳಿಕ ಆತನ ದೈವಿಕ ತಂದೆ-ತಾಯಿ (ಹರಿ ಮತ್ತು ಹರ) ಆತನ ಕೊರಳಿಗೆ ಬಂಗಾರದ ಮಣಿಯನ್ನು ಕಟ್ಟುತ್ತಾರೆ ಮತ್ತು ಆತನನ್ನು ಪಂಪಾ ನದಿ ತೀರದಲ್ಲಿ ಬಿಡುತ್ತಾರೆ. ಒಮ್ಮೆ ಪಂಪಾ ನದಿಯ ದಡದಲ್ಲಿರುವ ಕಾಡಿನಲ್ಲಿ ಬೇಟೆಯಾಡಲು ಹೊರಟ ಪಂದಳ ರಾಜ ರಾಜಶೇಖರನಿಗೆ ಕಾಡಿನೊಳಗಿಂದ ಶಿಶುವೊಂದು ಅಳುವ ಶಬ್ಧ ಕೇಳಿಬರುತ್ತದೆ. ಅಚ್ಚರಿಗೊಂಡ ರಾಜನು ಆ ದನಿಯನ್ನು ಹಿಂಬಾಲಿಸಿ ಹೋದನು. ಅಲ್ಲಿ ರಾಜನು ಒಂದು ಮುದ್ದು ಮಗುವನ್ನು ಕಂಡನು. ಕೌತುಕದಿಂದ ಆ ಮಗುವನ್ನು ನೆಟ್ಟ ನೋಟದಿಂದ ನೋಡುತ್ತಿದ್ದ ರಾಜನ ಮುಂದೆ ಸನ್ಯಾಸಿಯೊಬ್ಬ ಪ್ರತ್ಯಕ್ಷನಾಗಿ ಆ ಶಿಶುವನ್ನು ಅರಮನೆಗೆ ಒಯ್ಯುವಂತೆ ಸೂಚಿಸಿದನು.
ಆ ಮಗುವಿನ ಸಾನ್ನಿಧ್ಯದಿಂದ ರಾಜ್ಯ ಸುಗಮವಾಗುವುದೆಂದು, ಹನ್ನೆರಡು ವರ್ಷದ ಬಳಿಕ ಮಗುವಿನ ದಿವ್ಯತ್ವ ಪ್ರಕಟವಾಗುವುದೆಂದೂ ಹೇಳಿ ಸನ್ಯಾಸಿ ರಾಜನನ್ನು ಎಚ್ಚರಿಸಿದನು. ಮಗುವಿನ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕಂಡ ಸನ್ಯಾಸಿ ಅವನಿಗೆ ಮಣಿಕಂಠನೆಂದು ನಾಮಕರಣ ಮಾಡಲು ಸೂಚಿಸಿದನು. ರಾಜನು ಹರ್ಷೋನ್ಮಾದದೊಂದಿಗೆ ಮಗುವನ್ನು ಅರಮನೆಗೆ ಕೊಂಡು ಹೋಗಿ ಮಹಾರಾಣಿಗೆ ನಡೆದ ಎಲ್ಲ ವಿಷಯಗಳನ್ನೂ ತಿಳಿಸಿದನು. ಶಿವನ ಅನುಗ್ರಹದಿಂದಲೇ ಇವೆಲ್ಲಾ ಸಂಭವಿಸಿದುವೆಂದು ಅವರಿಬ್ಬರೂ ನಂಬಿದರು.
ಅಯ್ಯಪ್ಪ ಸನ್ನಿಧಿಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ
ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಮತ್ತು ತಪಸ್ವಿಯಾಗಿದ್ದರು. ಅದಕ್ಕಾಗಿಯೇ ಅವರ ದರ್ಶನಕ್ಕೆ 10 ರಿಂದ 50 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಆದ್ರೆ ಈ ಹಿಂದೆ ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತ್ತು. ಆದ್ರೆ ಈ ತೀರ್ಪು ಅನೇಕ ಹೋರಾಟ, ಹಿಂಸೆಗೆ ಕಾರಣವಾಯಿತು. ಇದಾದ ಬಳಿಕ ಮಹಿಳೆಯರ ಪ್ರವೇಶದ ತೀರ್ಪು ಪ್ರಶ್ನಿಸಿ ಧ್ವನಿಗಳೆದ್ದವು. ಹೀಗಾಗಿ ಇದರ ಮರು ಪರಿಶೀಲನೆಗೆ ಬೇಡಿಕೆ ಹೆಚ್ಚಾಗಿ ಈ ತೀಪಿನ ಬಗ್ಗೆ ಇನ್ನೂ ಕೂಡ ಚರ್ಚೆಗಳು ನಡೆಯುತ್ತಿವೆ.
ಮಕರ ಸಂಕ್ರಾಂತಿಯ ರಾತ್ರಿ ಆಕಾಶದಲ್ಲಿ ಬೆಳಕು
ಇನ್ನು ಇಲ್ಲಿ ನಡೆಯುವ ಮತ್ತೊಂದು ವಿಸ್ಮಯವೆಂದರೆ ಇಲ್ಲಿ ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ.
ದೇವಾಲಯದ ಆಡಳಿತದ ಅರ್ಚಕರ ಪ್ರಕಾರ, ಮಕರ ತಿಂಗಳ ಮೊದಲ ದಿನ ಆಕಾಶದಲ್ಲಿ ಕಾಣುವ ವಿಶೇಷ ನಕ್ಷತ್ರವನ್ನೇ ಮಕರ ಜ್ಯೋತಿ ಎಂದು ಕರೆಯಲಾಗುತ್ತದೆ. ನಮ್ಮ ಆಕಾಶದಲ್ಲಿ ಗೋಚರಿಸುವ ಸೂರ್ಯನ ನಂತರ ಮಕರ ಜ್ಯೋತಿ ಎರಡನೇ ಪ್ರಕಾಶಮಾನವಾದ ನಕ್ಷತ್ರವಾಗಿದೆ, ಇದರ ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ಆದರೆ ಭಕ್ತರು ಹೇಳುವ ಪ್ರಕಾರ, ಇದು ನಕ್ಷತ್ರವಾಗಿದ್ದರೆ ಇಡೀ ಪ್ರಪಂಚಕ್ಕೆ ಕಾಣಿಸಬೇಕಾಗಿತ್ತು, ಆದರೆ ಕೇವಲ ಇಲ್ಲಿ ಮಾತ್ರ ಯಾಕೆ ಕಾಣಿಸುತ್ತದೆ ಎಂದು ಪ್ರಶ್ನೆಯನ್ನು ಮಾಡುತ್ತಾರೆ. ಇಂದಿಗೂ ಕೂಡ ಇದು ಇಲ್ಲಿ ರಹಸ್ಯವಾಗಿಯೇ ಉಳಿದಿದೆ.
ಹಣೆಗೆ ವಿಭೂತಿ ಅಥವಾ ಚಂದನವನ್ನು ಹಚ್ಚಿಕೊಂಡು, ಮುಖ ಕ್ಷೌರವನ್ನು ಮಾಡಿಸದೆ, ಬೆಳಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಸ್ನಾನ ಮಾಡುತ್ತ ಅಯ್ಯಪ್ಪನ ಆರಾಧನೆ ಮಾಡುವ ಭಕ್ತರು ಸಂಕ್ರಾಂತಿ ಸಮಯದಲ್ಲಿ ಎಲ್ಲರೂ ತಂಡ ತಂಡವಾಗಿ ಗುರುಸ್ವಾಮಿ ಎಂದು ಕರೆಯುವ ನಾಯಕನ ನೇತೃತ್ವದಲ್ಲಿ ಶಬರಿಮಲೆಗೆ ಬಂದು ತಲುಪುತ್ತಾರೆ.