ಬೆಂಗಳೂರು: ರಾಜ್ಯ ಬಿಜೆಪಿ ಮೇಲೆ ಬಿಎಸ್ವೈ ಸ್ಪಷ್ಟ ಹಿಡಿತ ಸಾಧಿಸಿದೆ. ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ವಿಜಯೇಂದ್ರರನ್ನು (BY Vijayendra) ಪಟ್ಟು ಹಿಡಿದು ಕೂರಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ (bS Yediyurappa) ಇದೀಗ ವಿಪಕ್ಷ ನಾಯಕ್ ಆಯ್ಕೆಯಲ್ಲೂ ಮೇಲುಗೈ ಸಾಧಿಸಿದ್ದಾರೆ. ಮಾಜಿ ಡಿಸಿಎಂ ಆರ್ ಅಶೋಕ್ರನ್ನು ವಿಪಕ್ಷ ನಾಯಕರನ್ನಾಗಿಸುವಲ್ಲಿ ಯಡಿಯೂರಪ್ಪ ಸಫಲರಾಗಿದ್ದಾರೆ.
ಚುನಾವಣೆ ನಡೆದ ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೀತು. ಈ ಸಭೆಯಲ್ಲಿ ವಿಪಕ್ಷ ನಾಯಕನ ಹುದ್ದೆಗೆ ಅಶೋಕ್ ಹೆಸರನ್ನು ಮಾಜಿ ಸಿಎಂ ಬೊಮ್ಮಾಯಿ ಸೂಚಿಸಿದ್ರೆ, ಸುನೀಲ್ ಕುಮಾರ್ (Sunil Kumar) ಅನುಮೋದಿಸಿದ್ರು. ಈ ಕ್ಷಣಕ್ಕೆ ಹೈಕಮಾಂಡ್ ಪ್ರತಿನಿಧಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಮತ್ತು ಇತರರು ಸಾಕ್ಷಿಯಾದ್ರು.
ಈ ಸಭೆಗೆ ಅಸಮಾಧಾನಿತ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ರಮೇಶ್ ಜಾರಕಿಹೊಳಿ (Ramesh Jarakiholi), ಎಸ್ಟಿ ಸೋಮಶೇಖರ್ (ST Somashekhar), ಶಿವರಾಮ್ ಹೆಬ್ಬಾರ್ (Shivaram Hebbar) ಗೈರಾದರು. ಉಳಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ಒಮ್ಮತ ವ್ಯಕ್ತವಾಯ್ತು. ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ಸಹಕಾರ ಪಡೆದು ಮುನ್ನಡೆಯೋದಾಗಿ ವಿಪಕ್ಷ ನಾಯಕ ಅಶೋಕ್ ಹೇಳಿದ್ರು. ತಮ್ಮ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿರೋದಕ್ಕೆ ಧನ್ಯವಾದ ಹೇಳಿದ್ರು. ಅಶೊಕ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರು. ಇದ್ರೊಂದಿಗೆ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ಲಿಂಗಾಯಿತ ಮತ್ತು ಒಕ್ಕಲಿಗ ಜಾತಿ ಸೂತ್ರದ ಮೊರೆ ಹೋಗಿದೆ.
ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು?: ಲೋಕಸಮರಕ್ಕೆ ಬಿಜೆಪಿ ಎಲ್+ಜಿ ಸೂತ್ರದ ಮೊರೆ ಹೋಗಿದೆ. ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯತರಿಗೆ ಕೊಟ್ಟು ವಿಪಕ್ಷ ನಾಯಕ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡಿದೆ. ಜೆಡಿಎಸ್ ಮೈತ್ರಿಯಿಂದಲೂ ವರ್ಕೌಟ್ ನಿರೀಕ್ಷೆ ಇಟ್ಟಿದೆ. ಹಾಗೆಯೇ ಒಕ್ಕಲಿಗ-ಲಿಂಗಾಯತ ಮತ ಗಳಿಸೋ ವಿಶ್ವಾಸವನ್ನು ಕೂಡ ಹೈಕಮಾಂಡ್ ಹೊಂದಿದೆ. ವಿಪಕ್ಷ ನಾಯಕ ಸ್ಥಾನ ಒಬಿಸಿಗೆ ನೀಡಿದ್ರೆ ಒಕ್ಕಲಿಗ ಮತ ಕೈತಪ್ಪೋ ಭಯ ಬಿಜೆಪಿ ಹೈಕಮಾಂಡ್ಗಿದೆ. ಈ ಹಿನ್ನೆಲೆಯಲ್ಲಿ ಅಳೆದು ತೂಗಿ ವಿಪಕ್ಷ ನಾಯಕನ ಆಯ್ಕೆಯನ್ನು ಹೈಕಮಾಂಡ್ ಮಾಡಿದೆ.
ಅಶೋಕ್ ಆಯ್ಕೆಗೆ ಕಾರಣವೇನು?: ಆರ್ ಅಶೋಕ್ (R Ashok) ಅವರು ಸತತ 7 ಬಾರಿಯ ಶಾಸಕರಾಗಿರುವ ಹಾಗೆಯೇ ಡಿಸಿಎಂ, ಮಂತ್ರಿಯಾಗಿದ್ದ ಅನುಭವವಿದೆ. ಪಕ್ಷದಲ್ಲಿ ಒಕ್ಕಲಿಗ ಸಮಯದಾಯದ ಮುಂಚೂಣಿ ನಾಯಕರಾಗಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯ ನಾಯಕ, ಪಕ್ಷ ನಿಷ್ಠರಾಗಿದ್ದಾರೆ. ಸರ್ಕಾರದ ಮಂತ್ರಿಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಪಕ್ಷದಲ್ಲಿ ಎಲ್ಲರ ಜೊತೆ ಸಮನ್ವಯತೆ, ಹೊಂದಾಣಿಕೆ ಸ್ವಭಾವವಿದ್ದು, ಯಡಿಯೂರಪ್ಪ ಬಣ, ಸಂತೋಷ್ ಬಣದವರ ಜೊತೆಗೂ ಅಶೋಕ್ ಚೆನ್ನಾಗಿದ್ದಾರೆ. ನೂತನ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಜೊತೆಗೂ ಒಳ್ಳೆಯ ಕೆಮಿಸ್ಟ್ರಿ ಇದೆ. ಇತ್ತ ದೋಸ್ತಿ ಜೆಡಿಎಸ್ ಜೊತೆಗೂ ಉತ್ತಮ ನಂಟು ಇರುವುದರಿಂದ ಆರ್ ಅಶೋಕ್ ಅವರನ್ನು ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದೆ.