ಹೊಂಬಾಳೆ ಫಿಲ್ಮ್ಸ್ (Hombale Films) ಮತ್ತು ಯಶ್ (Yash) ನಡುವೆ ಸಂಬಂಧ ಹಳಸಿದೆ ಎಂದೆಲ್ಲ ರೂಮರ್ ಹರಿಬಿಡಲಾಗಿತ್ತು. ಯಶ್ ಮತ್ತು ಹೊಂಬಾಳೆ ಸಂಸ್ಥೆಯು ಬಾಂಧವ್ಯ ಚೆನ್ನಾಗಿದ್ದರೂ, ಅದಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿತ್ತು. ಅಂತವರಿಗೆ ಸರಿಯಾದ ರೀತಿಯಲ್ಲಿ ಚಾಟಿ ಏಟು ಬೀಸಿದ್ದಾರೆ ಯಶ್ ಮತ್ತು ಹೊಂಬಾಳೆ ಸಂಸ್ಥೆ. ತಮ್ಮ ನಡುವೆ ಉತ್ತಮ ಬಾಂಧವ್ಯ ಇರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರಚುರ ಪಡಿಸಿದೆ.
ಯಶ್ ಅವರ ಹೊಸ ಸಿನಿಮಾ ಟಾಕ್ಸಿಕ್ ಗೆ ಶುಭ ಕೋರಿ ಹೊಂಬಾಳೆ ಫಿಲ್ಮ್ಸ್ ಎಕ್ಸ್ (ಟ್ವೀಟ್) ಮಾಡಿದ್ದರೆ, ಪ್ರತಿಯಾಗಿ ಯಶ್ ಕೂಡ ಕಾಂತಾರ ಚಾಪ್ಟರ್ 1 (Kantara Chapter 1) ಮತ್ತು ಸಲಾರ್ ಸಿನಿಮಾ ಕುರಿತಾಗಿ ಅಭಿನಂದನೆ ತಿಳಿಸಿದ್ದಾರೆ. ಎರಡೂ ಸಿನಿಮಾಗಳಿಗಾಗಿ ತಾವು ಕಾಯುತ್ತಿರುವುದಾಗಿ ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳಿಗೆ ಸಖತ್ ಉತ್ತರವನ್ನೇ ಕೊಟ್ಟಿದ್ದಾರೆ.
ಬಹುನಿರೀಕ್ಷಿತ ಸಲಾರ್ ಸಿನಿಮಾವನ್ನು ಕೇವಲ ಯಶ್ ಮಾತ್ರ ಕಾಯುತ್ತಿಲ್ಲ, ಕೋಟ್ಯಂತರ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಈ ನಡುವೆ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿಯ ಪ್ರಮಾಣ ಪತ್ರವನ್ನು ನೀಡಿದ್ದು, ತೀವ್ರಗತಿಯ ಸಾಹಸ ಸನ್ನಿವೇಶಗಳು ಇರುವ ಕಾರಣದಿಂದಾಗಿ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಭಾರತದಲ್ಲಿನ ಪ್ರದರ್ಶನಕ್ಕಾಗಿ ‘ಎ’ ಮತ್ತು ಹೊರ ದೇಶದಲ್ಲಿನ ಪ್ರದರ್ಶನಕ್ಕಾಗಿ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 55 ನಿಮಿಷ ಎಂದು ಹೇಳಲಾಗುತ್ತಿದೆ