ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ವಿಳಂಬವಾಗುತ್ತಿರುವುದು ಮತ್ತು ಆರ್ಥಿಕ ಇಲಾಖೆ ಸೂಚನೆ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ತಿಂಗಳದ್ದು ಸುಮಾರು ಒಂದು ಕೋಟಿ ಹತ್ತು ಲಕ್ಷ ಜನರಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿದೆ. ಕೆವೈಸಿ ತೊಂದರೆ, ತಾಂತ್ರಿಕ ತೊಂದರೆ ಆಗಿದ್ದರಿಂದ ಹಣ ವರ್ಗಾವಣೆಗೆ ತೊಂದರೆ ಆಗಿದೆ. ಸರ್ಕಾರದಿಂದ ಹಣ ಬರುವುದು ಕೂಡ ಲೇಟ್ ಆಗ್ತಿದೆ. ತಡವಾದರೂ ಒಮ್ಮೆಯೇ ನಾಲ್ಕು ಸಾವಿರ ಹಣ ಜಮಾ ಆಗುತ್ತದೆ. ಅಗಸ್ಟ್ 30ರ ನಂತರ ನೋಂದಣಿ ಮಾಡಿಸಿದವರಿಗೆ ಒಂದು ಕಂತಿನ ಹಣ ಬಂದಿದೆ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಇಲಾಖೆಯಿಂದ ಆಗ್ತಿದೆ. ಬೆಂಗಳೂರಿನ ಬಾಲ ಭವನದಲ್ಲಿ ಪ್ರತಿಯೊಂದು ಜಿಲ್ಲೆಯ ಸಿಡಿಪಿಒ ಕರೆದು ಕ್ಲಿಯರ್ ಮಾಡುತ್ತಿದ್ದೇವೆ. ಆರ್ಥಿಕ ಇಲಾಖೆಯ ಸುತ್ತೋಲೆಯನ್ನು ಸೋಮವಾರ ನೋಡಿದ್ದೇನೆ. ಇದು ಬಹಳ ಒಳ್ಳೆಯದು, ಜನರಿಗೆ ಹಣ ಯಾವಾಗ ಬರುತ್ತೆ ಅಂತಾ ಗೊಂದಲವಿತ್ತು. 15ರಿಂದ 20ರ ಒಳಗೆ ಗೃಹಲಕ್ಷ್ಮಿ ಹಣ ಬರುತ್ತೆ ಅನ್ನೋ ವಿಶ್ವಾಸವಿರಲಿ. ಆರ್ಥಿಕ ಇಲಾಖೆ ಹೀಗೆ ಮಾಡುವುದರಿಂದ ಒಳ್ಳೆಯದಾಗಿದೆ. ಸರ್ಕಾರದಿಂದ ಖಾತೆಗೆ ಹಣ ಬರಲು 25ದಿನ ಬೇಕಾಗುತ್ತಿತ್ತು. ಈಗ ಅದನ್ನ ಬಹಳ ಸರಳೀಕರಣ ಮಾಡಿದ್ದೇವೆ ಎಂದರು.