ಬೆಂಗಳೂರು:- ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಜೋರಾಗಿ ಚರ್ಚೆ ಆಗುತ್ತಿದ್ದ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾಜಿ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
X ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಅ ಅವರ ನಾಯಕತ್ವ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯತೆ, ಸಾಂಸ್ಕೃತಿಕ ಪುನರುತ್ಥಾನದ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ನಾನು ಬಿಜೆಪಿ ಪಕ್ಷ ಸೇರಿದ್ದು, ಬಿಜೆಪಿ ಪಕ್ಷ ತೊರೆಯುವ ಯೋಚನೆಯಾಗಲಿ, ಉದ್ದೇಶವಾಗಲಿ ಅಥವಾ ಅವಶ್ಯಕತೆಯಾಗಲಿ ನನಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ನಾನು ಪಕ್ಷ ತೊರೆಯುತ್ತೇನೆ ಎಂಬ ಊಹಾಪೋಹಗಳನ್ನು ಕೆಲವರು ಪದೇ ಪದೇ ಹುಟ್ಟುಹಾಕುತ್ತಿದ್ದು, ಮಾಧ್ಯಮಗಳು ಇಂತಹ ವದಂತಿಗಳಿಗೆ, ಗಾಳಿಸುದ್ದಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಹಾಗೂ ಇತರ ನಾಯಕರ ಜೊತೆ ಚರ್ಚಿಸಿರುವ ಸುಧಾಕರ್, ನಿರಂತರವಾಗಿ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚಿಸಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಇದಕ್ಕೆ ಪೂಕರವೆಂಬಂತೆ ಮೂರು ದಿನಗಳ ಹಿಂದಷ್ಟೇ ಸೋಮಶೇಖರ್ ಜೊತೆ ಸುಧಾಕರ್ ಮಾತುಕತೆ ನಡೆಸಿದ್ದರು. ಇದಕ್ಕೆ ಹೊಸಕೋಟೆ ನಾಯಕನಿಂದ ಆಕ್ಷೇಪ ವ್ಯಕ್ತಪಡಿಸಿದ್ದರು ಸುದ್ದಿ ಹರಿದಾಡಿತ್ತು. ಮತ್ತೊಂದಡೆ, ಸುಧಾಕರ್ ಅವರನ್ನು ಮರಳಿ ಪಕ್ಷಕ್ಕೆ ಕರೆಸಿಕೊಳ್ಳುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರ ನಿರ್ಧಾರದ ಮೇಲೆ ನಿಂತಿದೆ ಎನ್ನುವ ಸುದ್ದಿ ಹಬ್ಬಿತ್ತು. ಇದೀಗ ಅವರೇ ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ್ದು, ಎಲ್ಲಾ ಗೊಂದಲಗಳಿಗೆ ತೆರೆಬಿದ್ದಂತಾಗಿದೆ.