ಬಾಗಲಕೋಟೆ:- ನಾವು ಆಪರೇಷನ್ ಹಸ್ತ ಮಾಡುವುದಿಲ್ಲ, ಜ.26ರವರೆಗೆ ಕಾದು ನೋಡಿ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸೇರ್ಪಡೆಗೆ ಹಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಂಪರ್ಕದಲ್ಲಿದ್ದಾರೆ. ಯಾರು ಬರಲಿದ್ದಾರೆ ಎಂಬುದಕ್ಕೆ ಜ.26ರವರೆಗೆ ಕಾದು ನೋಡಿ ಎಂದರು.
ಆಪರೇಷನ್ ಹಸ್ತ ಮಾಡುವುದಿಲ್ಲ. ಅವರೇ ನಮ್ಮ ಪಕ್ಷದ ತತ್ವ, ಸಿದ್ದಾಂತ ಮೆಚ್ಚಿ ಬರಲಿದ್ದಾರೆ. ಕರೆದುಕೊಂಡು ಬಂದ ಮೇಲೆ ಸೂಕ್ತ ಸ್ಥಾನಮಾನ ಕೊಡಬೇಕಾಗುತ್ತದೆ. ಸೇರ್ಪಡೆ ಮಾಡಿಕೊಳ್ಳಲು ಯಾವುದೇ ಅವಸರ ಮಾಡುವುದಿಲ್ಲ ಎಂದರು.
ಬಿಜೆಪಿ, ಜೆಡಿಎಸ್ ನಾಯಕರು ತಮ್ಮ ಶಾಸಕರು ಹಾಗೂ ಮುಖಂಡರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಐದು ವರ್ಷ ಸರ್ಕಾರ ಸುಭದ್ರವಾಗಿರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರಿದ್ದಾರೆ. ಈಗ ಬಿಜೆಪಿ ಅಧ್ಯಕ್ಷರಾಗಿರುವವರು ಶಿವಮೊಗ್ಗ, ಮೈಸೂರಿಗೆ ಸೀಮಿತವಾದವರು. ಅವರ ಪ್ರಭಾವ ಇಲ್ಲಿಲ್ಲ. ಬಿಜೆಪಿಗೆ ಲಿಂಗಾಯತರನ್ನು ಅದ್ಯಕ್ಷರನ್ನಾಗಿ ಮಾಡಿದ್ದೇವೆ ಎಂಬುದರ ಲಾಭ ದೊರೆಯುವುದಿಲ್ಲ ಎಂದು ಹೇಳಿದರು.
ಅಧ್ಯಕ್ಷರ ನೇಮಕಾತಿಯ ಬಗ್ಗೆ ಬಿಜೆಪಿಯಲ್ಲಿ ದೊಡ್ಡ ಪ್ರಮಾಣದ ಅಸಮಾಧಾನವಿದೆ. ಅದು ಸ್ಫೋಟಗೊಳ್ಳುವುದಷ್ಟೇ ಬಾಕಿ ಇದೆ ಎಂದರು.