2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಆಲ್ ರೌಂಡರ್ ಪ್ರದರ್ಶನ, ಗೌತಮ್ ಗಂಭೀರ್ ಮಿಂಚಿನ ಆಟ ಹಾಗೂ ಮಹೇಂದ್ರ ಸಿಂಗ್ ಧೋನಿಯ ಸ್ಫೋಟಕ ಸಿಕ್ಸರ್ ನೆರವಿನಿಂದ ಶ್ರೀಲಂಕಾವನ್ನು ಮಣಿಸಿದ್ದ ಟೀಮ್ ಇಂಡಿಯಾ 28 ವರ್ಷಗಳ ನಂತರ ವಿಶ್ವಕಪ್ ಮುಕುಟವನ್ನು ಮುಡಿಗೇರಿಸಿಕೊಂಡಿತ್ತು. 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿಕೊಂಡ ಸ್ಪಿನ್ ಆಲ್ ರೌಂಡರ್ ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರೊಂದಿಗೆ ಪಂದ್ಯವನ್ನು ವೀಕ್ಷಿಸಿದ ಅನುಭವವನ್ನು ಸ್ಮರಿಸಿಕೊಂಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರವೀಂದ್ರ ಜಡೇಜಾ, ” 2011ರ ವಿಶ್ವಕಪ್ ಫೈನಲ್ ಸಮಯದಲ್ಲಿ ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರೊಂದಿಗೆ ಅಭ್ಯಾಸದಲ್ಲಿ ತೊಡಗಿದ್ದೆವು. ಪಂದ್ಯ ವೀಕ್ಷಿಸುವ ಸಲುವಾಗಿ ನೆಟ್ ಅಭ್ಯಾಸವನ್ನು ಸ್ಥಗಿತಗೊಳಿಸಿ ತಂಡದ ಎಲ್ಲಾ ಆಟಗಾರರು ಒಂದೇ ಕೊಠಡಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದೆವು. ಭಾರತದ ಆರಂಭಿಕ 2 ವಿಕೆಟ್ ಬಿದ್ದಾಗ ನಾವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆವು” ಎಂದು ಸ್ಪಿನ್ ಆಲ್ ರೌಂಡರ್ ಸ್ಮರಿಸಿದ್ದಾರೆ.


