ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನದಲ್ಲಿ ಜಂಗಮ ದೈವ ಮಂಡಳ ಕ್ಷೇಮಾಭಿವೃದ್ಧಿ ಸಂಘದ
ನೂತನ ಪದಾಧಿಕಾರಿಗಳ ಅಧಿಕಾರಗ್ರಹಣ ಸಮಾರಂಭ ನಡೆಯಿತು.
ಜಾಯಿಯಿಂದ ಯಾರೂ ಮೇಲು ಮತ್ತು ಕೀಳು ಎಂಬುದಾಗಿಲ್ಲ. ಬದಲಾಗಿ ನಾವು ಕೈಗೊಳ್ಳುವ ಕಲ್ಯಾಣಪರ ಕಾಯಕಗಳು ಮತ್ತು ಅಳವಡಿಸಿಕೊಳ್ಳುವ ಸುಗುಣಗಳಿಂದ ಉಚ್ಛತಮ ವಿಚಾರ-ಆಚಾರಗಳಿಂದ ಗೌರವ ಸ್ಥಾನ ಪಡೆದುಕೊಳ್ಳುತ್ತೇವೆ.
ಜಾತಿಯಿಂದ ಜಂಗಮರಾಗದೇ ನೀತಿಯಿಂದ ಜಂಗಮರಾಗಿ ಮೇಲ್ಪಂಕ್ತಿಯ ಬದುಕು ನಡೆಸಬೇಕು.
ಜಂಗಮ ಸಮಾಜ ಎಲ್ಲ ಸಮಾಜಗಳೊಡನೆ ಸುಮಧುರ ಬಾಂಧವ್ಯ ಹೊಂದಿರುವ ಸಮುದಾಯವಾಗಿದ್ದರೂ ಸಂಘಟನೆ ಬಲಗೊಳಿಸುವಲ್ಲಿ ಮುಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ನಮ್ಮ ಜಂಗಮ ಪರಂಪರೆಯ ಮೂಲ
ಕ್ರೀಯಾವಿಧಿ-ವಿಧಾನಗಳನ್ನು ನೆರವೇರಿಸುತ್ತ ಎಲ್ಲರೊಡನೆ ಸಾಮರಸ್ಯದ ಬದುಕು ನಮ್ಮದಾಗಬೇಕು. ಸಮಾಜಕ್ಕೆ ವ್ಯಸನಮುಕ್ತ ಬಾಂಧವರ ಅಗತ್ಯತೆ ಇಂದು ಹೆಚ್ಚಿದೆ.
ನಮ್ಮನ್ನು ಇತರೆ ಸಮಾಜಗಳು ಗೌರವದಿಂದ ಕಾಣಲು ನಮ್ಮಲ್ಲಿನ ಆಚರಣಾ ಮತ್ತು ಕ್ರೀಯಾ ವಿಧಾನಗಳೇ ಕಾರಣವಾಗಿದ್ದು, ನಮ್ಮ ಸಾಮಾಜಿಕ ಬದ್ಧತೆಯ ವೃತ್ತಿಗೆ ಕಪ್ಪುಚುಕ್ಕೆ ಆಗದಂತೆ ಸಮುದಾಯದ ಸರ್ವರನ್ನು ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುವುದು ಹಿರಿಯರು ಸೇರಿ ನೂತನ ಪದಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರಶ್ರೀಗಳು ಆಶೀರ್ವಚನ ನೀಡಿದರು.
ಜನ್ಮದಿಂದ ಬರುವ ಜಾತಿಯಿಂದ ನಮಗೆ ಗೌರವ ಸಿಗದು ಬದಲಾಗಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಶುದ್ಧವಾದ ನಡತೆ, ವ್ಯಸನಮುಕ್ತ ಮತ್ತು ಅನುಕರಣೀಯ ಜೀವನ, ಸದಾಚಾರ ಸಂಪನ್ನ ವ್ಯಕ್ತಿತ್ವಗಳಿಂದ ಮತ್ತು ನಾವು ಆಚರಿಸುವ ಕ್ರೀಯಾಯುತ ಜೀವನಕ್ರಮ ಮತ್ತು ದೈವಿಕ ಆಶ್ರಿತ ನಂಬಿಕೆಗಳಿಂದ ನಮ್ಮನ್ನು ಎಲ್ಲರೂ ಗೌರವಿಸುತ್ತಾರೆಂದರು. ವೇದಿಕೆಯಲ್ಲಿ ಸಾನಿಧ್ಯ ವಹಿಸಿದ್ದ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಜಂಗಮ ಸ್ಥಾನ ಪಾವಿತ್ರತೆಯಿಂದ ಕೂಡಿದೆ ಅದರ ಪಾವಿತ್ರ್ಯ೦ತೆಗೆ ತಕ್ಕಂತೆ ನಾವೆಲ್ಲ ನಮ್ಮ ಜೀವನಶೈಲಿ ರೂಪಿಸಿಕೊಳ್ಳಬೇಕು.
ಪೂಜ್ಯತೆಯ ನಂಬಿಕೆಗೆ ಧಕ್ಕೆಯಾಗದಂತೆ ಮತ್ತು ಸರ್ವ ಸಮುದಾಯಗಳ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ನಮ್ಮ ಜೀವನ ನಿರ್ವಹಿಸಬೇಕೆಂದರು.
ಅತಿಥಿಗಳಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ವಿಶ್ವನಾಥ ವಂಶಾಕೃತಮಠ ಮಾತನಾಡಿ ಜಂಗಮ ವಂಶದಲ್ಲಿ ೨೪ ರೀತಿಯ ಉದ್ಯೋಗಗಳು ಇದ್ದು, ಅವೆಲ್ಲವೂ ಸರ್ವ ಸಮುದಾಯಗಳ ಏಕತ್ರಗೊಳಿಸಿ ವೀರಶೈವ ಪರಂಪರೆಯನ್ನು ರಕ್ಷಿಸುವತ್ತ ಅನಾದಿ ಕಾಲದಿಂದ ಶ್ರಮಿಸುತ್ತಿದ್ದು, ನಾವು ಇಂದಿನ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಮೂಲತ್ವವನ್ನು ಕಳೆದುಕೊಳ್ಳದೇ ನಮ್ಮ ಆಚಾರ-ವಿಚಾರ, ಪರಂಪರೆಗಳನ್ನು ಮುಂದಿನ ಜನಾಂಗಕ್ಕೂ ಪರಿಚಯಿಸುವ ಮೂಲಕ ಶೈವ ಪರಂಪರೆಯನ್ನು ಉಳಿಸಿ, ಭಕ್ತರ ಆಶೋತ್ತರಗಳಿಗೆ ಸ್ಪಂದಿಸಬೇಕೆಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಗಂಗಾಧರ ಅಮ್ಮಣಗಿ, ಶಂಭುಲಿಂಗಯ್ಯಾ ಹಿರೇಮಠ, ಶಿವಾನಂದ ಬಾಗಲಕೋಟಮಠ, ಶಂಭುಲಿಂಗ ಕಡ್ಡಿ, ನೂತನ ಅಧ್ಯಕ್ಷ ಗುರುಪಾದಯ್ಯಾ ಅಮ್ಮಣಗಿಮಠ, ಉಪಾಧ್ಯಕ್ಷ ಶಿವಾನಂದ ಮಠದ, ಕಾರ್ಯದರ್ಶಿ ಮಹಾದೇವ ಮಠಪತಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ವೀರಶೈಲ-ಲಿಂಗಾಯತ ಪಂಗಡಗಳ ಎಲ್ಲ ಸಮುದಾಯಗಳ ಭಕ್ತರು ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ದುಂಡಯ್ಯ ಕಾಡದೇವರ, ಮಲ್ಲಿಕಾರ್ಜುನ ನಾಶಿ, ರವಿ ಮುತ್ತೂರ, ವಜ್ರಕಾಂತ ಕಮತಗಿ, ಚಿದಾನಂದ ಸೊಲ್ಲಾಪುರ, ರಮೇಶ ಮಠಪತಿ, ವಿವೇಕಾನಂದ ಹಿರೇಮಠ, ಸಂಜಯ ಅಮ್ಮಣಗಿಮಠ, ಗಂಗಯ್ಯಾ ಹಿರೇಮಠ, ವೀರಯ್ಯಾ ಮಠಪತಿ, ಚಿದಾನಂದ ಅಮ್ಮಣಗಿಮಠ, ರುದ್ರಯ್ಯಾ ಅಮ್ಮಣಗಿಮಠ, ಶಿವಾನಂದ ಚಿಕ್ಕಮಠ, ದಾನಯ್ಯಾ ಪೂಜಾರಿ, ವಿದ್ಯಾನಂದ ಬಾಗಲಕೋಟಮಠ, ವಿಶ್ವನಾಥ ಮಠ, ಪ್ರಭುಲಿಂಗ ಹಿಪ್ಪರಗಿಮಠ, ಮೃತ್ಯುಂಜಯ ಮಠಪತಿ ಸೇರಿದಂತೆ ಪ್ರಮುಖರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ