ಮೈಸೂರು ;- ಚುನಾವಣೆ ಫಲಿತಾಂಶದಿಂದ ಬುದ್ಧಿ ಕಲಿತಿದ್ದೇವೆ ಎಂದು ಮಾಜಿ ಸಿಎಂ ಸದಾನಂದಗೌಡರು ಹೇಳಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರ, ನಮಗೇ ಜನ ಮತ ಹಾಕುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದೆವು. ಆದರೆ, ಚುನಾವಣೆ ಫಲಿತಾಂಶದಿಂದ ಬುದ್ಧಿ ಕಲಿತಿದ್ದೇವೆ. ಪಕ್ಷ ಆಡಳಿತದಲ್ಲಿ ಇದ್ದಾಗ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ನೋವಿದೆ. ಅದನ್ನು ಮುಂದೆ ಸರಿಪಡಿಸುವ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
1980ರ ದಶಕದಲ್ಲಿ ಬಿಜೆಪಿಗೆ ಯಡಿಯೂರಪ್ಪ ಒಬ್ಬರೇ ಶಾಸಕ ಆಗಿದ್ದರು. ಆದರೆ, ನಂತರದಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಗೋಡೆಗಳಿಗೆ ಪಕ್ಷದ ಪೋಸ್ಟರ್ ಹಂಚುತ್ತಿದ್ದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಹಾಗೆಯೇ ನಿಮಗೂ ಅವಕಾಶ ಸಿಗಲಿದೆ’ ಎಂದು ಆತ್ಮವಿಶ್ವಾಸ ತುಂಬಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ‘ವಿಧಾನಸಭೆ ಚುನಾವಣೆ ಸೋತಿರುವ ನಮಗೆ ಮತ್ತೊಮ್ಮೆ ಪರೀಕ್ಷೆ ಎದುರಾಗಿದೆ. ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ಗೆಲ್ಲಬೇಕು’ ಎಂದರು.
‘ಕಾಂಗ್ರೆಸ್ ಬಿಜೆಪಿ ವೈಫಲ್ಯಗಳನ್ನು ಸಾಬೀತುಪಡಿಸಿ ಅಧಿಕಾರಕ್ಕೆ ಬಂದಿಲ್ಲ. ಕೇವಲ ಗ್ಯಾರಂಟಿ ಯೋಜನೆಗಳ ಘೋಷಣೆ ಮೂಲಕ ಅಧಿಕಾರ ಹಿಡಿದಿದೆ. ಆದರೂ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ’ ಎಂದು ಟೀಕಿಸಿದರು.
