ಬೆಂಗಳೂರು;- ಕೇಂದ್ರದ ಭಿಕ್ಷೆ ನಮಗೆ ಬೇಡ, ಕಾನೂನು ಪ್ರಕಾರ ಬರಪರಿಹಾರ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಈಗಾಗಲೇ ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬಿಜೆಪಿ-ದಳದವರಿಗೆ ಅನುಕಂಪ ಬಂದು ಬರ ಅಧ್ಯಯನಕ್ಕೆ ಹೊರಟಿದ್ದಾರೆ. ಅದರ ಬದಲು ಬರದ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಪರಿಹಾರ ಹಣ ಕೊಡಿಸಬೇಕು. ಪ್ರಚಾರಕ್ಕಾಗಿ ಎರಡು ಗಿಡ ನೋಡಿಕೊಂಡು ಬಂದರೆ ಏನು ಆಗುವುದಿಲ್ಲ. ನಾವು ಗಿಡಗಳನ್ನು ನೋಡಿದ್ದೇವೆ, ನಿಮ್ಮಿಂದ ರಾಜ್ಯಕ್ಕೆ ಏನಾಗಿದೆ?. ನಾವು ಭಿಕ್ಷೆ ಬೇಡುತ್ತಿಲ್ಲ, ಕಾನೂನು ಪ್ರಕಾರ ಹಣ ಬಿಡುಗಡೆ ಮಾಡಬೇಕು ಎಂದರು.
ಈಗಾಗಲೇ ಸರ್ಕಾರ ಉತ್ತಮ ಅಧ್ಯಯನ ನಡೆಸಿದೆ. ಕೇಂದ್ರ ಸರ್ಕಾರಕ್ಕೆ ವರದಿ ಕೊಡಲಾಗಿದೆ. ವರದಿಯನ್ನು ಸ್ವೀಕಾರ ಮಾಡಿದ ಕೇಂದ್ರ ಸರ್ಕಾರ, ಅಧ್ಯಯನಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ರು. 26 ಸಂಸದರು, 19 ಜೆಡಿಎಸ್ ಶಾಸಕರು, 65 ಬಿಜೆಪಿ ಶಾಸಕರು ಪ್ರಧಾನಿಯವರನ್ನು ಭೇಟಿ ಮಾಡಲಿ ಎಂದು ಆಗ್ರಹಿಸಿದರು.
ಸಚಿವ ಸಂಪುಟದಲ್ಲಿ ಈಗಾಗಲೇ 800 ಕೋಟಿ ರೂ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದೇವೆ. ಕುಡಿಯುವ ನೀರು, ಮೇವು, ಬರ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ಉಪಯೋಗ ಮಾಡಬೇಕು ಎಂದು ಹಣ ಕೊಟ್ಟಿದ್ದೇವೆ. ಬರಗಾಲ ಸಂದರ್ಭದಲ್ಲಿ ನರೇಗಾ ಮಾನವ ದಿನಗಳನ್ನು ಹೆಚ್ಚಿಸಬೇಕು ಎಂದು ಹೇಳಿದ್ದೇವೆ. ಪ್ರಸ್ತುತ ಇರುವ 100 ಮಾನವ ದಿನಗಳನ್ನು 150ಕ್ಕೆ ಹೆಚ್ಚಳ ಮಾಡಬೇಕು ಎಂದು ಪತ್ರ ಬರೆಯಲಾಗಿದೆ. ಆದರೆ ಎರಡು ಮೂರು ತಿಂಗಳು ಆದರೂ ಪ್ರಾರಂಭಿಸಿಲ್ಲ. ಕೂಡಲೇ ಬಿಜೆಪಿ ಸಂಸದರು ಹಾಗೂ ಅವರ ನೆಂಟಸ್ಥಿಕೆಯಲ್ಲಿರುವ ದಳದವರು ಹೋಗಲಿ. ಹೋಗಿ ಮನವಿ ಮಾಡಲಿ, ರಾಜಕಾರಣ ಮಾಡಲಿ ನಾವು ಬೇಡ ಎನ್ನಲ್ಲ ಎಂದು ತಿರುಗೇಟು ನೀಡಿದರು.