ಬೆಂಗಳೂರು:- ನಾವು ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ನುಡಿದಂತೆ ನಡೆಯುತ್ತಿದ್ದೇವೆ. ವಚನ ಪಾಲನೆಯ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಈಗ ಪ್ರಜೆಗಳಾದ ನಿಮ್ಮ ಸರದಿ. ಗ್ಯಾರಂಟಿ ಯೋಜನೆಗಳ ಒಂದು ಪೈಸೆಯನ್ನೂ ದುರುಪಯೋಗ ಮಾಡಲಾರೆ ಎಂಬ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕಿದೆ ಎಂದರು.
ಐದು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ತವ್ಯ, ಈ ಯೋಜನೆಗಳು ದುರುಪಯೋಗ ಆಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ.