ಬೆಂಗಳೂರು:- ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ಬಿಎಂಟಿಸಿಯು 7.37 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಡಿಸೆಂಬರ್ ತಿಂಗಳಿನಲ್ಲಿ 3,849 ಪ್ರಯಾಣಿಕರಿಂದ ಈ ಪ್ರಮಾಣದ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಡಿಸೆಂಬರ್ ತಿಂಗಳಿನಲ್ಲಿ ಬಿಎಂಟಿಸಿಯ ತನಿಖಾ ತಂಡಗಳು 16,785 ಟ್ರಿಪ್ಗಳನ್ನು ತಪಾಸಣೆ ನಡೆಸಿ 3,502 ಟಿಕೆಟ್ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದು, ಅವರಿಂದ 7,02,340 ರೂ. ದಂಡ ವಸೂಲು ಮಾಡಲಾಗಿದೆ. ಅಲ್ಲದೆ, ಬಿಎಂಟಿಸಿಯ ನಿರ್ವಾಹಕರ ವಿರುದ್ಧ 1,085 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷ ಪ್ರಯಾಣಿಕರಿಗೆ 34,700 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದೆ. ಬಿಎಂಟಿಸಿ ಬಸ್ಗಳಲ್ಲಿ ಅಧಿಕೃತ ಟಿಕೆಟ್, ದಿನದ ಪಾಸ್, ಮಾಸಿಕ ಪಾಸ್ಗಳನ್ನು ಪಡೆದು ಪ್ರಯಾಣಿಸುವುದರಿಂದ ಅನಗತ್ಯವಾಗಿ ದಂಡ ಕಟ್ಟುವುದನ್ನು ತಪ್ಪಿಸಬಹುದಾಗಿದೆ.