ಬೆಂಗಳೂರು:– ಹುಡಿಗಿಯರನ್ನೇ ಟಾರ್ಗೆಟ್ ಮಾಡಿಕೊಂಡು, ನಿಮಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಹೇಳಿ ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡುವ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ.
ಗ್ರಾಮೀಣ ಭಾಗದಲ್ಲಿ ಕಾಲೇಜು ಹಂತದವರೆಗೆ ಓದಿಕೊಂಡು ಮನೆಯಲ್ಲಿರುವ ಬಡತನವನ್ನು ನೀಗಿಸಲು ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕಂಪನಿಗಳು ಹಾಗೂ ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಜೀವನ ನಡೆಸುವಂತಹ ಹುಡುಗಿಯರು ಹಾಗೂ ಹೆಣ್ಣು ಮಕ್ಕಳೇ ಹುಷಾರಾಗಿರಿ.
ಕಾರಣ ನಿಮ್ಮಂತಹ ದುಡಿಮೆಗೆ ಬಂದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ನಿಮಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಬಣ್ಣ ಬಣ್ಣದ ಮಾತನಾಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುವ ಹಾಗೂ ಕೆಲಸದ ಆಮಿಷವೊಡ್ಡಿ ಅನ್ಯ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವ ಗ್ಯಾಂಗ್ ಸಕ್ರಿಯವಾಗಿದೆ. ಹೀಗೆ, ಹಳ್ಳಿ ಹುಡುಗಿಯರಿಂದ ಲಕ್ಷಾಂತರ ರೂ. ಹಣವನ್ನು ಪಡೆದು ಬ್ಯಾಂಕಾಕ್ಗೆ ಹೋಗಿ ಮಜಾ ಉಡಾಯಿಸುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.
ಬಣ್ಣ ಬಣ್ಣದ ಮಾತನಾಡಿ ಲಕ್ಷಾಂತರ ರೂ. ಹಣವನ್ನು ಪಡೆದು ಮೋಸ ಮಾಡಿ ತಾನು ಬ್ಯಾಂಕಾಕ್ಗೆ ಹೋಗಿ ಮಜಾ ಮಾಡುತ್ತಿದ್ದ ಆರೋಪಿ ಮೋಹನ್ ಕುಮಾರ್ (53) ಎಂಬಾತನನ್ನ ಬೆಂಗಳೂರಿನ ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿಗೆ ಬಣ್ಣ, ಬಣ್ಣದ ಮಾತುಗಳೇ ಬಂಡವಾಳ ಆಗಿದೆ. ತನಗೆ ಸರ್ಕಾರಿ ಅಧಿಕಾರಿಗಳು ಹಾಗೂ ಸರ್ಕಾರದ ಎಲ್ಲ ಸಚಿವರು ಗೊತ್ತು ಎಂದು ಹೇಳಿಕೊಂಡು ಹಳ್ಳಿಯಿಂದ ಬಂದ ಯುವತಿಯರು ಹಾಗೂ ಮಹಿಳೆಯರಿಗೆ ತೋರಿಸುತ್ತಿದ್ದನು. ತಾಲೂಕು ಕಚೇರಿ ಹಾಗೂ ಬಿಬಿಎಂಪಿ ಕಚೇರಿಗಳಲ್ಲಿನ ಸಣ್ಣಪುಟ್ಟ ಪ್ರಮಾಣಪತ್ರಗಳನ್ನು ಮಾಡಿಸಿಕೊಟ್ಟು ನಂಬಿಕೆ ಗಿಟ್ಟಿಸಿಕೊಳ್ಳುವ ಈ ವ್ಯಕ್ತಿ ನಂತರ, ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಹಣವನ್ನು ಪಡೆದು ಪಂಗನಾಮ ಹಾಕುತ್ತಿದ್ದನು.
ಬೆಂಗಳೂರಿನಲ್ಲಿ ಹಳ್ಳಿಗಳಿಂದ ಬಂದು ವಾಸ ಮಾಡಿವ ಯುವತಿಯರು, ಮಹಿಳೆಯರಿಗೆ ಸರ್ಕಾರ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಹುದ್ದೆಗಳನ್ನು ಕೊಡೊಸುವುದಾಗಿ ಹೇಳಿ ಏಣಿಯಿಲ್ಲದೇ ಆಕಾಶಕ್ಕೆ ಹತ್ತಿಸುತ್ತಿದ್ದನು. ಇನ್ನು ಮಹಿಳೆಯರು ತಾವು ದುಡಿದ ಹಣವನ್ನು ಈತನಿಗೆ ಕೊಟ್ಟರೆ, ಹೊಸದಾಗಿ ಬೆಂಗಳೂರಿಗೆ ಬಂದ ಯುವತಿಯರು ಊರಲ್ಲಿರುವ ಪೋಷಕರಿಗೆ ಜಮೀನು ಮಾರಿಸಿ, ಅಥವಾ ಮದುವೆಗೆ ಕೂಡಿಟ್ಟ ಹಣವನ್ನು ಪಡೆದು ಈತನಿಗೆ ಕೊಡುತ್ತಿದ್ದರು. ಈ ಎಲ್ಲ ಹಣವನ್ನು ಪಡೆದು ಒಂದೆರಡು ಬಾರಿ ವಿಧಾನಸೌಧದ ಮುಂದೆ ಹೋಗಿ ಫೋಟೋ ತೆಗೆಸಿಕೊಂಡು ಬಂದು ನಿಮ್ಮ ಫೈಲ್ ರಿಜಿಸ್ಟರ್ ಆಗಿದೆ ಎಂತೇಳಿ ಮತ್ತಷ್ಟು ಹಣ ವಸೂಲಿ ಮಾಡುತ್ತಿದ್ದನು.