ಮಂಡ್ಯ: ಸರ್ಕಾರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಂಕಷವಾಗಿ ತನಿಖೆ ನಡೆಸಬೇಕು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಂಕಷವಾಗಿ ತನಿಖೆ ನಡೆಸಬೇಕು.
ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು. ಸರ್ಕಾರ ಈಗಾಗಲೇ ಎಲ್ಲೋ ಒಂದು ಕಡೆ ಎಡವಿದೆ. ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡದೇ ವಿಡಿಯೋ ಹರಿಬಿಟ್ಟಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕಿತ್ತು. ಈಗ ಸಂತ್ರಸ್ಥ ಮಹಿಳೆಯರಿಗೆ ಪೊಲೀಸರಿಂದ ತೊಂದರೆಯಾಗುತ್ತಿದೆ. ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಲ್ಲಿ ಸೂಕ್ತ ತನಿಖೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪೆನ್ ಡ್ರೈವ್ ಹಂಚಿಕೆ ಹೆಚ್ಡಿಕೆ ಕೈವಾಡ ಇದೆ ಎಂಬ ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತವಾದ ಮಂತ್ರಿಯಾಗಿ ಚಲುವಣ್ಣ ಕೆಲಸ ಮಾಡ್ತಿದ್ದಾರೆ. ಈ ರೀತಿ ಅಪಪ್ರಚಾರ, ಆರೋಪ ಮಾಡ್ಕೊಂಡು ಹೋಗುವುದು ಸೂಕ್ತ ಅಲ್ಲ. ಎಸ್ಐಟಿ ಮೇಲೆ ನಂಬಿಕೆ ಇಲ್ಲ ಅಂದ್ರೆ ಸಿಬಿಐಗೆ ಕೊಡಿ ಕೂಲಂಕಷವಾಗಿ ತನಿಖೆಯಾಗುತ್ತೆ. ಎಸ್ಐಟಿಯು ಸಂತ್ರಸ್ತರಿಗೆ ಒತ್ತಡ ಹಾಕುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ನನ್ನ ಸಂಪರ್ಕದಲ್ಲಿ ಇಲ್ಲ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ರಕ್ಷಣೆ ಕೊಡಲಿ. ಸಿಬಿಐಗೆ ವಹಿಸಿದರೆ ಕೂಲಂಕಷವಾಗಿ ತನಿಖೆಯಾಗಿ ಸತ್ಯಸತ್ಯತೆ ಹೊರಗೆ ಬರುತ್ತೆ. ಮುಜುಗರಕ್ಕೆ ಕಾರಣ ಯಾರು? ಪೆನ್ ಡ್ರೈವ್ ಹಂಚಿದ್ದು ಯಾರು? ಹೆಣ್ಣುಮಕ್ಕಳ ಚಿತ್ರ ಯಾಕೆ ತೋರಿಸಿದ್ರಿ, ಈ ಬಗ್ಗೆಯೂ ತನಿಖೆಯಾಗಲಿ ಎಂದರು.