ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮುದಾಯದ ಉದ್ಯಮಗಳನ್ನು ಒಂದೇ ವೇದಿಕೆ ಅಡಿಯಲ್ಲಿ ತರುವ ನಿಟ್ಟಿನಲ್ಲಿ ಫೆ.23, 24 & 25 ರಂದು ವೀರಶೈವ ಲಿಂಗಾಯತ ಜಾಗತಿಕ ವಾಣಿಜ್ಯ ಸಮಾವೇಶವನ್ನು ನಗರದ ಬಿವ್ಹಿಬಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಸಂತೋಷ ಕೆಂಚ್ಚಂಬಾ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ವೀರಶೈವ ಲಿಂಗಾಯತ ಸಮೂದಾಯದ ಉದ್ಯಮಿಗಳು, ವೃತ್ತಿಪರರನ್ನು ಒಂದೇ ವೇದಿಕೆ ಅಡಿಯಲ್ಲಿ ತರುವುದು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಿ ಆರ್ಥಿಕ, ಕೈಗಾರಿಕಾ, ವ್ಯಾಪಾರೀಕ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದುವರೆಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ಈ ಸಮಾವೇಶದಲ್ಲಿ ರಾಜ್ಯ ಸರ್ಕಾರ ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೊದ್ಯಮಿಗಳಿಗೆ, ರೈತರಿಗೆ, ಉತ್ತೇಜಿಸುವ ಕುರಿತು ಚರ್ಚೆ, ಜಿಲ್ಲಾ ಮಟ್ಟದಲ್ಲಿ ಸ್ಟಾರ್ಟ್ ಅಪ್ ಘಟಕವನ್ನು ಬಲಪಡಿಸುವುದು, ನಿರೀಕ್ಷಿತ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದು, ಕರ್ನಾಟಕದಾದ್ಯಂತ ರೈತ ಸಮುದಾಯವನ್ನು ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರಗಳನ್ನು ಅನ್ವೇಷಿಸುವುದು ಸೇರಿದಂತೆ ಹತ್ತಾರು ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಫೆ.23 ರಂದು ಸಂಜೆ 4 ಕ್ಕೆ ಸಮಾವೇಶ ಹಾಗೂ ಮಳಿಗೆ ಉದ್ಘಾಟನೆ ಮಾಡಲಾಗುತ್ತಿದೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೆಎಲ ಇ ಅಧ್ಯಕ್ಷ ಪ್ರಭಾಕರ ಕೋರೆ, ಅರಣ್ಯ ಸಚಿವ ಈಶ್ವರ ಖಂಡ್ರೆ, ಮಹಾರಾಷ್ಟ್ರ ಶಾಸಕ ವಿನಯ ಕೋರೆ, ಶಾಸಕ ಅರವಿಂದ ಬೆಲ್ಲದ ಪಾಲ್ಗೊಳ್ಳುವರು ಎಂದರು.
ಫೆ.೨೪ ರಂದು ಸಂಜೆ ಸಂಜೆ ವೈದ್ಯರ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ೩೦೦ಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳುವರು ಎಂದು ಹೇಳಿದರು. ಫೆ.25 ರಂದು ಸಂಜೆ 5.30 ಕ್ಕೆ ಸಮಾರೋಪ ನಡೆಯಲಿದೆ. ಶಾಸಕ ಎಂ.ಬಿ.ಪಾಟೀಲ್, ಉದ್ಯಮಿ ವಿಜಯ ಸಂಕೇಶ್ವರ ಸೇರಿದಂತೆ ವಿವಿಧ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚೆನ್ನು ಹೊಸಮನಿ, ರಮೇಶ ಪಾಟೀಲ್, ಸಿದ್ದು ಮಠದ, ರವಿರಾಜ ಕಮ್ಮಾರ, ಶಶಿಧರ ಶೆಟ್ಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.