ಮುಂಗಾರು ಪೀಕು ಕೈಕೊಟ್ಟು ಲಕ್ಷಾಂತರ ರೂ. ಹಾನಿ ಅನುಭವಿಸಿರುವ ರೈತರ ಸಂಖ್ಯೆ ಅಧಿಕವಾಗಿದೆ. ನಷ್ಟ ಉಂಟಾಗಿರುವ ಬಗ್ಗೆ ಫೋಟೋ ಸಮೇತ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ನಯಾಪೈಸೆ ಪರಿಹಾರ ಈವರೆಗೂ ರೈತರ ಕೈಗೆ ಸಿಕ್ಕಿಲ್ಲ. ಸರ್ವೇ ಕೆಲಸಕ್ಕೆ ಬರುವುದಾಗಿ ಹೇಳಿರುವ ಅಧಿಕಾರಿಗಳು 15 ದಿನ ಕಳೆದರೂ ಇನ್ನೂ ಬಂದಿಲ್ಲ ಅನ್ನೋ ನಿರಾಸೆಯಲ್ಲೇ ಇದ್ದಾರೆ. ಈ ಹಂತದಲ್ಲಿ ಶೇ.25 ರಿಂದ 30 ರಷ್ಟು ರೈತರು ಅಧಿಕಾರಿಗಳಿಗಾಗಿ ಕಾಯದೇ ಚಿಕ್ಕಾಸಿನ ಜತೆಗೆ ಅವರಿವರ ಹತ್ತಿರ ಸಾಲ ಮಾಡಿ ಪುನಃ ಬಿತ್ತುವ ಮನಸ್ಸು ಮಾಡಿದ್ದಾರೆ. ಹಾಳಾಗಿದ್ದ ಬೆಳೆಯನ್ನೇ ಪುನಃ ಹರಗಿ ಜಮೀನು ಹದ ಮಾಡಿಕೊಂಡು ಬಿತ್ತನೆ ಮಾಡುವ ಅಂತಿಮ ಹಂತದಲ್ಲಿದ್ದಾರೆ. ಇನ್ನೂ ಕೆಲವರು ಬಿತ್ತನೆ ಮಾಡಿದ್ದಾರೆ.
ಯಾವ ಬೆಳೆ? ಎಷ್ಟು ಎಕರೆ?: ಜಿಲ್ಲೆಯ ಹಾವೇರಿ ಮತ್ತು ಸವಣೂರ ತಾಲೂಕಿನ ವರದಾ ನದಿ ಪಾತ್ರದ ಕಳಸೂರು, ಮಂಟಗಣಿ, ಕೋಳೂರ ಸೇರಿದಂತೆ ಅಕ್ಕಪಕ್ಕದ ನೂರಾರು ರೈತರು ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಶೇ.99 ರೈತರು ಗೊಂಜಾಳ ಬಿತ್ತನೆ ಮಾಡಿದ್ದರೆ, ಬೆರಳೆಣಿಕೆ ಜನರು ಹೈಬ್ರೀಡ್ ಜೋಳ ಬಿತ್ತನೆ ಮಾಡಿ, ಸಾಲ ತೀರಿಸುವ ಜತೆಗೆ ತುತ್ತಿನ ಚೀಲ ತುಂಬಿಸಿಕೊಳ್ಳುವ ಮಾರ್ಗ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

