ಬೆಳಗಾವಿ: ತನ್ನದೇ ಸರ್ಕಾರದ ಮೇಲೆ ಬಿಜೆಪಿ ಶಾಸಕ ಗರಂ ಆಗಿದ್ದು, ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಧರಣಿಗೆ ಸಜ್ಜಾಗಿದ್ದಾರೆ. ಉತ್ತರ ಕರ್ನಾಟಕ ವಿಚಾರ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್.ನಡಹಳ್ಳಿ ಕಿಡಿಕಾರಿದ್ದಾರೆ. ಇಂದು ಬೆಳಗಾವಿ ಅಧಿವೇಶನದ ಕೊನೆಯ ದಿನವಾಗಿದ್ದು, ಈ ಹಿನ್ನೆಲೆ ದೇವರಹಿಪ್ಪರಗಿ ಶಾಸಕ ಎ.ಎಸ್.ನಡಹಳ್ಳಿ, ಉತ್ತರ ಕರ್ನಾಟಕದ ಬಗ್ಗೆ ಯಾವೋಂದು ಸಮಸ್ಯೆ ಬಗ್ಗೆ ಚರ್ಚೆಯಾಗಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ದ ಗುಡುಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ದೇವರ ಹಿಪ್ಪರಗಿ ಶಾಸಕ ಎ.ಎಸ್.ನಡಹಳ್ಳಿ,
ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕಕ್ಕೆ ಮೀಸಲು ಅಂತಾರೆ, ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ಮಾಡೋಕೆ ಅವಕಾಶ ಕೊಡುತ್ತಿಲ್ಲ. ಕಳೆದ 10 ದಿನಗಳಲ್ಲಿ ನಮ್ಮ ಭಾಗದ ಸಮಸ್ಯೆಗಳು ಚರ್ಚೆಯಾಗಿಲ್ಲ, ಸ್ಪೀಕರ್, ಸಿಎಂ, ವಿಪಕ್ಷ ನಾಯಕರು ನಮ್ಮ ಭಾಗ ಪ್ರತಿನಿಧಿಸುತ್ತಾರೆ, ಹತ್ತು ದಿನದ ಅಜೆಂಡಾದಲ್ಲಿ ಈ ಭಾಗದ ಬಗ್ಗೆ ಚರ್ಚೆಯೇ ಆಗಿಲ್ಲ. ಇಂದು ಅಧಿವೇಶನದ ಕೊನೆಯ ದಿನವಾಗಿರುವುದರಿಂದ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ಕೇಳಿ ಸ್ಪೀಕರ್ಗೆ ಮನವಿ ಮಾಡುತ್ತೇವೆ, ಅವಕಾಶ ಸಿಗದೇ ಇದ್ದರೆ ಹೋರಾಟ ಮಾಡುತ್ತೇನೆ ಎಂದು ನಡಹಳ್ಳಿ ಗುಡುಗಿದ್ದಾರೆ.
