ಉತ್ತರ ಪ್ರದೇಶ: ಇಂದು ಬೆಳ್ಳಂ ಬೆಳಗ್ಗೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಐವರನ್ನು ಕೊಲೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಲ್ಲಿ ಎರಡು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವ ಜೋಡಿಯೂ ಸೇರಿದೆ. ಆರೋಪಿಯನ್ನು ಕಿಶ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲ್‌ಪುರ ಗ್ರಾಮದ ಶಿವವೀರ್ ಯಾದವ್ (28), ಎಂದು ಗುರುತಿಸಲಾಗಿದೆ. ಈತ ತನ್ನ ಇಬ್ಬರು ಸಹೋದರರು, ಅತ್ತಿಗೆ, ಬಾವ ಮತ್ತು ಸ್ನೇಹಿತನನ್ನು ಕೊಂದಿದ್ದಾನೆ. ಅಲ್ಲದೇ ತನ್ನ ಪತ್ನಿ ಮತ್ತು ಚಿಕ್ಕಮ್ಮನ ಮೇಲೂ ಹಲ್ಲೆ ನಡೆಸಿದ್ದು ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ವಿಶೇಷ ಮಹಾನಿರ್ದೇಶಕ (ಎಸ್‌ಡಿಜಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಶಿವವೀರ್ ಯಾದವ್ (28) ತನ್ನ ತಮ್ಮಂದಿರಾದ ಭುಲ್ಲನ್ ಯಾದವ್ (25) ಮತ್ತು ಸೋನು ಯಾದವ್ (21), ಸೋನು ಅವರ ಪತ್ನಿ ಸೋನಿ (20), ಬಾವ ಸೌರವ್ (23) ಮತ್ತು ತನ್ನ ಸ್ನೇಹಿತ ದೀಪಕ್ (20)ನನ್ನು ಹತ್ಯೆಗೈದಿದ್ದಾನೆ. ಗಂಭೀರವಾಗಿ ಗಾಯಗೊಂಡವರನ್ನು ಶಿವವೀರ್ ಪತ್ನಿ ಡಾಲಿ (24) ಮತ್ತು ಆತನ ಚಿಕ್ಕಮ್ಮ ಸುಷ್ಮಾ (35) ಎಂದು ಗುರುತಿಸಲಾಗಿದೆ.
ಶಿವವೀರ್ ನೋಯ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಸೋನು ಮದುವೆಗಾಗಿ ಕೆಲ ದಿನಗಳಿಂದ ತಮ್ಮ ಗ್ರಾಮಕ್ಕೆ ಆಗಾಗ್ಗ ಭೇಟಿ ನೀಡುತ್ತಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯದ ಹಿಂದಿನ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.
