ಬೆಂಗಳೂರು:- ಕಟ್ಟಡ ನಿರ್ಮಾಣಕ್ಕೆ ಮಣ್ಣನ್ನು ಅಗೆಯುವಾಗ ಪಕ್ಕದ ಗೋಡೆಯ ಮಣ್ಣು ಕುಸಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಕಾರ್ಮಿಕರ ಪ್ರಾಣ ಹೋಗಿರುವ ಹಲವು ಘಟನೆಗಳು ನಡೆದಿವೆ. ಈಗ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತವಾಗಿದೆ. ಕಟ್ಟಡ ನಿರ್ಮಾಣ ಸಮಯದಲ್ಲಿ ಪಕ್ಕದಲ್ಲಿದ್ದ ಕಟ್ಟಡ ಕುಸಿದು ಬಿದ್ದಿದೆ. ಇಲ್ಲಿಯೂ ಕೂಡ ಕ್ರಿಸ್ಮಸ್ ಹಬ್ಬದ ದಿನವೇ ಮಣ್ಣು ಕುಸಿದು ಕಾರ್ಮಿಕನ ಪ್ರಾಣ ಹೋಗಿದೆ. ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಕಟ್ಟಡದ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಕೆಲಸಗಾರರನ್ನು ರಕ್ಷಣೆ ಮಾಡಲಾಗಿದೆ.
ಕಟ್ಟಡದ ಮಣ್ಣಿನ ಅಡಿ ಸಿಲುಕಿದ್ದ ಒರ್ವ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನನ್ನು ಬಿಹಾರ ರಾಜ್ಯದ ಸೋಮ್ ಪುರ್ ಮೂಲದ ರಂಜನ್ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮಣ್ಣಿನಡಿ ಸಿಲುಕಿದ್ದ ಮೃತ ದೇಹ ಹೊರ ತೆಗೆಯಲಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಮಣ್ಣಿನ ಕೆಳಗೆ ಸಿಲುಕಿದ್ದವರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಲು ಹೋಗಿದ್ದ ವೇಳೆ ಪಕ್ಕದಲ್ಲಿದ್ದ ಕಾಂಪೌಂಡ್ ಕೂಡ ಅವರ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾಂಪೌಂಡ್ನ ಕಲ್ಲುಗಳು ಎತ್ತರವಾಗಿ ಇಲ್ಲದ ಕಾರಣ ಸಣ್ಣ ಪುಟ್ಟ ಗಾಯಗಳೊಂದಿಗೆ ರಕ್ಷಣೆಗೆ ಯೋದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ