ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಸುದ್ದಿ ಮಾಧ್ಯಮವೊಂದರ ಸಂವಾದ (TV Debate) ಕಾರ್ಯಕ್ರಮದಲ್ಲಿ ಇಬ್ಬರು ರಾಜಕಾರಣಿಗಳು ಪರಸ್ಪರ ಹೊಡೆದಾಡಿಕೊಂಡ ಪ್ರಸಂಗ ನಡೆದಿದೆ. `ಕಲ್ ತಕ್’ ಎಂಬ ಶೋನಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ (Viral Video) ಆಗಿದೆ.
ಇಮ್ರಾನ್ ಖಾನ್ ಅವರ ವಕೀಲ ಶೇರ್ ಅಫ್ಜಲ್ ಮರ್ವಾತ್ ಮತ್ತು ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್‍ನ ಸೆನೆಟರ್ ಆಗಿರುವ ಅಫ್ನಾನ್ ಉಲ್ಲಾ ಬಡಿದಾಡಿಕೊಂಡ ವ್ಯಕ್ತಿಗಳಾಗಿದ್ದಾರೆ. ಸೆನೆಟರ್ ಅಫ್ನಾನ್ ಅವರು ಇಮ್ರಾನ್ ಖಾನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ಇಬ್ಬರ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ

ಮಾರ್ವತ್ ಪ್ರತಿವಾದ ಮಾಡುವ ಬದಲು ಹಲ್ಲೆ ನಡೆಸಿದ್ದಾರೆ. ಬಳಿಕ ಇಬ್ಬರು ತಲೆಗೆ ಹೊಡೆದುಕೊಂಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಇಬ್ಬರೂ ರಾಜಕಾರಣಿಗಳು ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಅಫ್ನಾನ್ ಉಲ್ಲಾ ಬಳಸಿರುವ ಅವಹೇಳನಕಾರಿ ಭಾಷೆಯಿಂದಾಗಿ ಮಾರ್ವತ್ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ. ಮತ್ತೊಂದೆಡೆ ಸೆನೆಟರ್ ಅಫ್ನಾನ್ ಉಲ್ಲಾ ಖಾನ್ ಅಹಿಂಸೆಯನ್ನು ನಂಬುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಿಂಸಾಚಾರವನ್ನು ತಡೆಯಲು ವಿಫಲವಾದ `ಕಲ್ ತಕ್’ನ ಹೋಸ್ಟ್ ಸಿಬ್ಬಂದಿಯ ಕ್ರಮವನ್ನು ಹಲವರು ಖಂಡಿಸಿದ್ದಾರೆ

