ಸ್ವತಂತ್ರ ಪ್ಯಾಲೆಸ್ತೀನ್ ಎಂಬ ಬರಹವುಳ್ಳ ಟೀ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಪಂದ್ಯ ವೇಳೆ ಕ್ರೀಡಾಂಗಣಕ್ಕೆ ನುಸುಳಿ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳಲು ಯತ್ನಿಸುವ ಮೂಲಕ ಆತಂಕದ ವಾತಾವರಣವನ್ನು ಸೃಷ್ಟಿಸಿದರು.
ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭದ್ರತಾ ಉಲ್ಲಂಘನೆ ವರದಿಯಾಗಿದೆ. ಕೆಂಪು ಬಣ್ಣದ ಶಾರ್ಟ್ಸ್ ಧರಿಸಿದ್ದ ವ್ಯಕ್ತಿ ತಾನು ಧರಿಸಿದ್ದ ಟೀ ಶರ್ಟ್ಸ್ ಮುಂಭಾಗದಲ್ಲಿ ಪ್ಯಾಲೆಸ್ತೀನ್ ಮೇಲಿನ ಬಾಂಬ್ ದಾಳಿ ನಿಲ್ಲಿಸಿ ಮತ್ತು ಹಿಂಭಾಗದಲ್ಲಿ ಸ್ವತಂತ್ರ ಪ್ಯಾಲೆಸ್ತೀನ್ ಎಂಬ ಸಂದೇಶ ಹೊಂದಿದ್ದರು. ಅಲ್ಲೆ, ಪ್ಯಾಲೆಸ್ತೀನ್ ಬಣ್ಣದ ಫೇಸ್ ಮಾಸ್ಕ್ ಸಹ ಧರಿಸಿದ್ದರು.
ಅ.7ರಂದು 5 ಸಾವಿರ ರಾಕೆಟ್ಗಳಿಂದ ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ದಿಢೀರನೇ ದಾಳಿ ಮಾಡಿರುವುದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಿದ್ದು, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾಗಿ ಒಂದೂವರೆ ತಿಂಗಳ ಸಮೀಪಕ್ಕೆ ಬಂದಿದೆ. ಪ್ಯಾಲೆಸ್ತೀನ್ನಲ್ಲಿ ಹಮಾಸ್ ಹೊರತುಪಡಿಸಿ ಸಾಮಾನ್ಯ ನಾಗರಿಕರ ಮೇಲಿನ ದಾಳಿಯ ವಿರುದ್ಧ ಜಗತ್ತಿನಾದ್ಯಂತ ಭಾರೀ ಖಂಡನೆಗಳು ವ್ಯಕ್ತವಾಗುತ್ತಿವೆ.
ಈ ಬಗ್ಗೆ ಗಮನ ಸೆಳೆಯಲು ವ್ಯಕ್ತಿಯೊಬ್ಬ ಇಂದು ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಬಾವುಟ ಹಿಡಿದು ಕ್ರೀಡಾಂಗಣದ ಒಳಗಡೆ ನುಸುಳಿ ಆತಂಕದ ವಾತಾವರಣ ಸೃಷ್ಟಿ ಮಾಡಿದರು. ಕೊಹ್ಲಿ ಸಮೀಪಕ್ಕೆ ತೆರಳಿದ್ದ ವ್ಯಕ್ತಿ, ಅಪ್ಪಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಆಗಮಿಸಿ ವ್ಯಕ್ತಿಯನ್ನು ಕರೆದೊಯ್ದರು. ಸದ್ಯ ಆ ವ್ಯಕ್ತಿ ಚಂದಖೇಡಾ ಪೊಲೀಸ್ ಠಾಣೆಯಲ್ಲಿದ್ದಾರೆ.