ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಎದುರಿಸುತ್ತಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ ಎದುರಾಗಿದೆ. ರಾಜ್ ಕುಂದ್ರಾ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಇನ್ನೂ ಕೆಲವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆಯೂ ಒಮ್ಮೆ ರಾಜ್ ಕುಂದ್ರಾ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಇಡಿ ಇಲಾಖೆ ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ ಜುಹುವಿನ ಐಶಾರಾಮಿ ಮನೆ, ಪುಣೆಯ ಮನೆ ಹಾಗೂ ಕೆಲವು ಈಕ್ವಿಟಿ ಷೇರುಗಳು ಸಹ ಇದ್ದವು. 6600 ಕೋಟಿ ಮೌಲ್ಯದ ಬಿಟ್ಕಾಯ್ನ್ ಹಗರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಲ್ಲಿ ರಾಜ್ ಕುಂದ್ರಾ ಮೇಲೆ ದಾಳಿ ಮಾಡಲಾಗಿತ್ತು.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ರಾಜ್ ಕುಂದ್ರಾ ಮೇಲೆ ದಾಳಿ ಆಗಿರುವ ಸಾಧ್ಯತೆ ಇದೆ. 2017 ರಲ್ಲಿ ರಾಜ್ ಕುಂದ್ರಾ ಮತ್ತು ಅವರ ಕೆಲವು ಆಪ್ತರು ಭಾರಿ ಮೊತ್ತದ ಹಣವನ್ನು ಬಿಟ್ಕಾಯ್ನ್ ಮೇಲೆ ಹೂಡಿಕೆ ಮಾಡಿ 6600 ಕೋಟಿಗೂ ಹೆಚ್ಚು ಹಣ ಗಳಿಸಿದ್ದರು. ಜೊತೆಗೆ ಜನರಿಗೆ ಶೇ 10 ಹಣ ಪಾವತಿಸುವುದಾಗಿ ಹೇಳಿ ಬಂಡವಾಳವನ್ನು ಸಹ ಆಕರ್ಷಿಸಿದ್ದರು. 2018 ರಲ್ಲಿ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ಈ ಬಗ್ಗೆ ಸಮನ್ಸ್ ನೀಡಿ ವಿಚಾರಣೆ ಸಹ ಮಾಡಲಾಗಿತ್ತು.
ಕೆಲವು ದಿನಗಳ ಹಿಂದೆಯಷ್ಟೆ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಭಾರಿ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದರು. ಗೆಳೆಯರನ್ನು ಕರೆಸಿ ಭರ್ಜರಿ ಪಾರ್ಟಿ ಕೊಟ್ಟಿದ್ದರು. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಜೋಡಿಗೆ ಇಡಿ ಅಧಿಕಾರಿಗಳ ದಾಳಿ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.