ಬೆಂಗಳೂರು :ಬೆಂಗಳೂರು ನಗರದ ಪ್ರತಿಷ್ಠಿತ ಮಂತ್ರಿಮಾಲ್ ಗೆ ಇದೀಗ ಭಾರೀ ಸಂಕಷ್ಟ ಎದುರಾಗಿದ್ದು, ಇದೀಗ ಆಸ್ತಿ ಮುಟ್ಟುಗೋಲು ಹಾಕಿ ಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಮಂತ್ರಿ ಮಾಲ್ ನಾಲ್ಕು ವರ್ಷಗಳಿಂದ 33 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು 2021ರ ಡಿಸೆಂಬರ್ 5ರಂದು ಸಂಪೂರ್ಣ ಕಟ್ಟುವುದಾಗಿ ಕಳೆದ ವರ್ಷವೇ ಹೇಳಿದ್ದರೂ ಇನ್ನೂ ತೆರಿಗೆ ಕಟ್ಟಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು.
ಹಲವಾರು ಬಾರಿ ಮಂತ್ರಿಮಾಲ್‌ಗೆ ಬೀಗ ಕೂಡ ಹಾಕಲಾಗಿತ್ತು. ಇಷ್ಟಾದರೂ ತೆರಿಗೆ ಇನ್ನೂ ಕಟ್ಟಲಿಲ್ಲ. ಈ ಕುರಿತು ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಬಂದಾಗ ನ್ಯಾಯಾಲಯವು, ‘ಪದೇ ಪದೇ ಈ ರೀತಿ ಬೀಗ ಹಾಕುವ ಬದಲು ಒಂದೇ ಸಲ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳಿ. ತೆರಿಗೆ ಪಾವತಿ ಮಾಡದಿದ್ದರೆ ಮಾಲ್‌ನ ಸ್ಥಿರ ಇಲ್ಲವೇ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಸಿವಿಲ್ ಕೇಸ್ ದಾಖಲು ಮಾಡಿ ಶಾಶ್ವತವಾಗಿ ಸಮಸ್ಯೆ ಪರಿಹರಿಸಿಕೊಳ್ಳಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಸೂಚಿಸಿದೆ.
