ಹುಬ್ಬಳ್ಳಿ: ದೆಹಲಿ ಸ್ಪೋರ್ಟ್ಸ್ ಯೂನಿರ್ವಸಿಟಿ(ಸ್ಕೂಲ್)ಗೆ ಧಾರವಾಡ ಜಿಲ್ಲೆಯಿಂದ ಮೂವರು ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯ ಉಣಕಲ್ನ ಒಬ್ಬರು ಹಾಗೂ ಧಾರವಾಡದ ಇಬ್ಬರು ಕುಸ್ತಿ ವಿಭಾಗದಲ್ಲಿ ಆಯ್ಕೆ ಆಗಿರುವುದು ಸಂತೋಷ ತಂದಿದೆ ಎಂದು ಉಣಕಲ್ನ ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಷನ್ ಅಧ್ಯಕ್ಷ ಸಂತೋಷ ಇಂಚಲ ತಿಳಿಸಿದರು.
ನಗರದಲ್ಲಿ ಬುಧವಾರ ಮಾಹಿತಿ ನೀಡಿದಅವರು, 9ನೇ ತರಗತಿಯ ಉಣಕಲ್ನ ಸರೋಜಾ ಚಿಲ್ಲಣ್ಣವರ, ಧಾರವಾಡದ ರಾಹುಲ ಚವ್ಹಾಣ ಹಾಗೂ 7ನೇ ತರಗತಿಯ ಗಂಗೋತ್ರಿ ಚವ್ಹಾಣ ಆಯ್ಕೆಯಾಗಿದ್ದಾರೆ ಎಂದರು.
ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿ (ಸ್ಕೂಲ್)ಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ಕರ್ನಾಟಕದಿಂದ ವಿವಿಧ ವಿಭಾಗಗಳಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಈ ಪೈಕಿ ಧಾರವಾಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿದಂತಾಗಿದೆ ಎಂದು ತಿಳಿಸಿದರು.ಸರೋಜಾ ಮತ್ತು ಗಂಗೋತ್ರಿ ಉಣಕಲ್ನ ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಷನ್ನಲ್ಲಿ ತರಬೇತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಗಂಗೋತ್ರಿ ಮತ್ತು ರಾಹುಲ ಸಧ್ಯ ಧಾರವಾಡದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವಸತಿ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ಹೇಳಿದರು.
ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿಯಲ್ಲಿ ಓದುವ ವಿದ್ಯಾರ್ಥಿಗಳನ್ನು ಒಲಿಪಿಂಕ್ಗೆ ಸಜ್ಜುಗೊಳಿಸಲಾಗುತ್ತದೆ. ಕುಸ್ತಿಯಲ್ಲಿ ಆದಾಗಲೇ ಹೆಸರು ಮಾಡಿರುವ ಧಾರವಾಡ ಈ ಮೂವರು ಗ್ರಾಮೀಣ ಪ್ರತಿಭೆಗಳು ದೇಶವನ್ನು ಪ್ರತಿನಿಧಿಸುವ ಅವಕಾಶ ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿ (ಸ್ಕೂಲ್) ಮುಖೇನ ಸಿಕ್ಕಂತಾಗಿದೆ ಎಂದು ತಿಳಿಸಿದರು.ಅಶೋಕ ಚಿಲ್ಲಣ್ಣವರ ಮಾತನಾಡಿ, ವರ್ಷದಿಂದ ತರಬೇತಿ ನೀಡುತ್ತಿದ್ದೇನೆ.
ತರಬೇತಿ ಪಡೆದವರಲ್ಲಿ ಒಟ್ಟು 9 ವಿದ್ಯಾರ್ಥಿಗಳು ಯೂನಿರ್ವಸಿಟಿ ಬ್ಲೂ ಮತ್ತು ನಾಲ್ವರು ದೆಹಲಿ ಸ್ಪೋರ್ಟ್ಸ್ ಯೂನಿರ್ವಸಿಟಿಗೆ ಆಯ್ಕೆಯಾಗಿದ್ದಾರೆ. ಆ. 10ರಂದು ಮಧ್ಯಾಹ್ನ 12ಕ್ಕೆ ಉಣಕಲ್ನ ಕಶ್ವರ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಅಂದು ತರಬೇತುದಾರರು ಮತ್ತಿತರರನ್ನು ಸನ್ಮಾನಿಸಲಾಗುವುದು ಎಂದರು.ಪ್ರಮುಖರಾದ ಸುರೇಶ ಬಾಗಮ್ಮನವರ, ಈರಣ್ಣ ಭದ್ರಾಪುರ, ಮಹಾದೇವ ಕಡಪಟ್ಟಿ, ಬಸವರಾಜ ಕರಿಲಿಂಗಣ್ಣವರ, ರುದ್ರಣ್ಣ ಕುಂಬಾರ ಇದ್ದರು.