ಬೆಂಗಳೂರು: ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿ ಮಾದರಿಯಲ್ಲೇ ನಗರದ ಶಾಲೆಗಳ (School) ಮೇಲೆ ಅಟ್ಯಾಕ್ ಮಾಡುವ ಬೆದರಿಕೆ ಸಂದೇಶಗಳು ಬಂದಿವೆ. ಭಾರತೀಯರು ಮುಸ್ಲಿಮರನ್ನು ಅವಹೇಳನ ಮಾಡುತ್ತಿದ್ದಾರೆ ಎಂದೇ ಈ ರೀತಿ ಸಂದೇಶಗಳನ್ನು ಕಳಿಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashoka) ಹೇಳಿದ್ದಾರೆ.
ಯಾರು ಈ ರೀತಿ ಸಂದೇಶ ಕಳಿಸಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಸಂದೇಶದಿಂದ ಶಾಲೆಯ ಮಕ್ಕಳ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಳಿಕ ಬಾಂಬ್ ಬೆದರಿಕೆ (Bomb Threat) ಸಂದೇಶ ಬಂದಿರುವ ಶಾಲೆಗಳ ಬಳಿ ಪರಿಸ್ಥಿತಿ ವೀಕ್ಷಣೆಗೆ ಅವರು ತೆರಳಿದ್ದಾರೆ.
ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಇ- ಮೇಲ್ ಮೂಲಕ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ ನಗರದ 20ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.