ಈ ವಾರದ ಕಳಪೆ ಪಟ್ಟವನ್ನು ಡ್ರೋನ್ ಪ್ರತಾಪ್ ಧರಿಸಿದ್ದಾರೆ. ಈ ವಾರದ ನಾಯಕತ್ವದ ಪರಿಣಾಮವಾಗಿ ಜೈಲುಡುಗೆ ತೊಟ್ಟ ಪ್ರತಾಪ್ ಚಿತ್ರ JioCinema ಬಿಡುಗಡೆ ಮಾಡಿರುವ ಬೆಳಗಿನ ಫ್ರೊಮೊದಲ್ಲಿ ಜಾಹೀರುಗೊಂಡಿದೆ.
ವಾರದ ಕೊನೆಗೆ ಕಳಪೆ ಯಾರು ಉತ್ತಮ ಯಾರು ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ.
‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ. ‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಅಗ್ರೆಶನ್ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ. ವರ್ತೂರು, ಸ್ನೇಹಿತ್ ಕೂಡ ಪ್ರತಾಪ್ ಹೆಸರನ್ನೇ ಹೇಳಿದ್ದಾರೆ.
ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯೇನೋ ತೊಟ್ಟಿದ್ದಾರೆ. ಆದರೆ ಅವರ ನಿರ್ಧಾರ ನನಗೆ ಸಮ್ಮತ ಅನಿಸಿಲ್ಲ ಎಂದೂ ಗಟ್ಟಿಯಾಗಿಯೇ ಹೇಳಿದ್ದಾರೆ. ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇತ್ತು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ’ ಎಂದು ಹೇಳಿ ಅವರು ಜೈಲಿನೊಳಗೆ ಹೋಗಿ ಕೂತಿದ್ದಾರೆ.