ಬೆಂಗಳೂರು: ಸಣ್ಣ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಇದೀಗ ಕರ್ನಾಟಕ ಸರ್ಕಾರ ಮುಂದಾಗಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿರುವ ಸೇಫ್ಟಿ ಹಾರ್ನೆಸ್ ಬೆಲ್ಟ್ ಕಡ್ಡಾಯ ನಿಯಮವನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರ ಈಗಾಗಲೇ ಈ ನಿಯಮವನ್ನು ಕಡ್ಡಾಯಗೊಳಿಸಿದ್ದರೂ, ಕರ್ನಾಟಕದಲ್ಲಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಈ ಕುರಿತು ಈಗಾಗಲೇ ಜಾಗೃತಿ ಅಭಿಯಾನ ಆರಂಭವಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಸೇಫ್ಟಿ ಹಾರ್ನೆಸ್ ಬೆಲ್ಟ್ ಇಲ್ಲದೆ ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಅವರು ರಸ್ತೆಗೆ ಬೀಳುವ ಅಪಾಯ ಹೆಚ್ಚಿದೆ. ಅನೇಕ ಸವಾರರು ತಮ್ಮ ಮಕ್ಕಳನ್ನು ಬೈಕ್ಗಳ ಪೆಟ್ರೋಲ್ ಟ್ಯಾಂಕ್ಗಳ ಮೇಲೆ ಕೂರಿಸುತ್ತಾರೆ ಅಥವಾ ಫುಟ್ರೆಸ್ಟ್ ಪ್ರದೇಶದಲ್ಲಿ ನಿಲ್ಲಲು ಅವಕಾಶ ನೀಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ಮಕ್ಕಳು ತಮ್ಮ ಸಮತೋಲನವನ್ನು ಕಳೆದುಕೊಳ್ಳಬಹುದು ಮತ್ತು ಬೀಳಬಹುದು. ವಿಶೇಷವಾಗಿ ಹಠಾತ್ ಬ್ರೇಕ್ ಹಾಕಿದಾಗ ಇಂಥ ಘಟನೆಗಳಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಕೆಲವು ಸಂದರ್ಭಗಳಲ್ಲಿ, ಸವಾರಿ ಮಾಡುವಾಗ ಮಕ್ಕಳು ನಿದ್ರಿಸಬಹುದು.
ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 138 (7) ಅನ್ವಯ 9 ತಿಂಗಳು ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಎಲ್ಲ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಹಾಕಲೇಬೇಕು.