ಕುಂಬಳಕಾಯಿ ಬೀಜಗಳು ನೋಡಲು ಚಿಕ್ಕದಾಗಿದ್ದರೂ, ಇದರಿಂದ ಅಪಾರವಾದ ಆರೋಗ್ಯ ಪ್ರಯೋಜನಗಳಿದೆ. ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇವಿಸುವ ಮೂಲಕ,
ನೀವು ದೀರ್ಘಕಾಲೀನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಬಿ 2, ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಸೈನ್ಸ್ ಡೈರೆಕ್ಟ್ನಲ್ಲಿನ ವರದಿಯ ಪ್ರಕಾರ, ಕುಂಬಳಕಾಯಿ ಬೀಜಗಳ ಸೇವನೆಯು ಕೊಲೊರೆಕ್ಟಲ್, ಸ್ತನ ಮತ್ತು ಹೊಟ್ಟೆಯ ಕ್ಯಾನ್ಸರ್ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಕುಂಬಳಕಾಯಿ ಬೀಜಗಳು ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ.
ರಕ್ತದಲ್ಲಿರುವ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ
ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಹೇರಳವಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಕುಂಬಳಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮಧುಮೇಹ ಹೊಂದಿರುವವರಿಗೆ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಇದನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.
ಉತ್ತಮ ನಿದ್ರೆ: ಕುಂಬಳಕಾಯಿ ಬೀಜಗಳು ಅಮೈನೋ ಆಮ್ಲವನ್ನು ಹೊಂದಿದ್ದು ಅದು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಈ ಬೀಜಗಳು ಟ್ರಿಪ್ಟೊಫಾನ್, ಸತು ಮತ್ತು ಮೆಗ್ನೀಸಿಯಮ್ಗಳಿಂದ ತುಂಬಿರುತ್ತವೆ. ಇವೆಲ್ಲವೂ ನಿದ್ರೆಯ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಉರಿಯೂತ ಶಮನಕಾರಿ
ಕುಂಬಳಕಾಯಿ ಬೀಜದಲ್ಲಿ ಉರಿಯೂತ ಶಮನಕಾರಿ ಗುಣಗಳಿದ್ದು, ಇದು ಸಂಧಿವಾತದ ನೋವು ಕಡಿಮೆ ಮಾಡುವುದು. ಗಂಟು ನೋವು ಕಡಿಮೆ ಮಾಡಲು ಇದು ಒಳ್ಳೆಯ ಮನೆಮದ್ದು.
ಪ್ರತಿರೋಧಕ ಶಕ್ತಿ ವೃದ್ಧಿ
ಈ ಬೀಜದಲ್ಲಿ ಅಧಿಕ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಫೈಥೋಕೆಮಿಕಲ್ ಇದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸುವುದು.
ಪ್ರಾಸ್ಟೇಟ್ ಆರೋಗ್ಯ
ಪುರುಷರ ಫಲವತ್ತೆ ಮತ್ತು ಪ್ರಾಸ್ಟೇಟ್ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸತು ತುಂಬಾ ಲಾಭಕಾರಿ. ಕುಂಬಳಕಾಯಿ ಬೀಜದಲ್ಲಿ ಇರುವಂತಹ ಡಿಎಚ್ ಇಎ ಅಂಶವು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು.
ಮಧುಮೇಹಿಗಳಿಗೆ ಒಳ್ಳೆಯದು
ಕುಂಬಳಕಾಯಿ ಬೀಜವು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿ ಇಡಲು ಸಹಕಾರಿ. ಇದರಲ್ಲಿ ಜೀರ್ಣಿಸಬಲ್ಲ ಪ್ರೋಟೀನ್ ಇದ್ದು, ಇದರಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವುದು.
ತೂಕ ಇಳಿಸಲು ಸಹಕಾರಿ
ಬೊಜ್ಜು ದೇಹವನ್ನು ಕರಗಿಸಲು ಬಯಸುವವರು ಕುಂಬಳಕಾಯಿ ಬೀಜ ಬಳಕೆ ಮಾಡಿದರೆ ಉತ್ತಮ. ಈ ಬೀಜದಲ್ಲಿ ಅತ್ಯಧಿಕ ಪ್ರಮಾಣದ ಪೋಷಕಾಂಶಗಳಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುವುದು. ಇದರಲ್ಲಿನ ನಾರಿನಾಂಶವು ಬಯಕೆ ಕಡಿಮೆ ಮಾಡುವುದು ಹಾಗೂ ಅನಾರೋಗ್ಯಕಾರಿ ತಿನ್ನುವುದನ್ನು ತಪ್ಪಿಸುವುದು.
ಕೂದಲಿನ ಬೆಳವಣಿಗೆಗೆ
ಕುಂಬಳಕಾಯಿ ಬೀಜದಲ್ಲಿ ಇರುವಂತಹ ಕುಕುರ್ಬಿಟಾಸಿನ್ ಎನ್ನುವ ಅಮಿನೋ ಆಮ್ಲವು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ. ಇದು ವಿಟಮಿನ್ ಸಿಯಿಂದಲೂ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಗೆ ಸಹಕಾರಿ. ಕುಂಬಳಕಾಯಿ ಬೀಜದ ಎಣ್ಣೆಯನ್ನು ತಲೆಗೆ ಹಾಕಬಹುದು ಅಥವಾ ನಿತ್ಯವೂ ಕುಂಬಳಕಾಯಿ ಬೀಜ ಸೇವನೆ ಮಾಡಬಹುದು.