ಅಂತಿಮ ವಿಕೆಟ್‌ಗೆ ಮಹದಿ ಹಸನ್ ಹಾಗೂ ಮಸ್ತಾಫಿಜುರ್ ರಹೆಮಾನ್ ಹೋರಾಟಕ್ಕೆ ಟೀಂ ಇಂಡಿಯಾ ತಲೆಬಾಗಿದೆ. ಒಂದು ವಿಕೆಟ್ ಕಬಳಿಸಲು ಪರದಾಡಿದ ಟೀಂ ಇಂಡಿಯಾ ಪಂದ್ಯವನ್ನೇ ಕೈಚೆಲ್ಲಿದೆ. ಆರಂಭದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬಳಿಕ ಬೌಲಿಂಗ್‌ನಲ್ಲಿ ಉತ್ತಮ ಹೋರಾಟ ನೀಡುವ ಮೂಲಕ ಕಮ್‌ಬ್ಯಾಕ್ ಮಾಡಿತು. ಆದರೆ ಟೀಂ ಇಂಡಿಯಾ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದೆ ಪಂದ್ಯ ಕೈಚೆಲ್ಲಿತು. ಮೆಹದಿ ಹಸನ್ ಅಜೇಯ 38 ರನ್ ಸಿಡಿಸುವ ಮೂಲಕ ಇನ್ನು ಒಂದು ಎಸೆತ ಬಾಕಿ ಇರುವಂತೆ ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು.
ಕಳಪೆ ಬ್ಯಾಟಿಂಗ್, ಅತ್ಯಲ್ಪ ಮೊತ್ತಕ್ಕೆ ಆಲೌಟ್ ಸೇರಿದಂತೆ ಟೀಂ ಇಂಡಿಯಾದ ಹಲವು ಸಮಸ್ಯೆಗಳಿಂದ ಬಾಂಗ್ಲಾದೇಶ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಸೈನ್ಯ ಮುಗ್ಗರಿಸಿದೆ. ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ಹೋದ ಭಾರತ, ಸ್ಫೋಟಕ ಇನ್ನಿಂಗ್ಸ್ ಕಟ್ಟಲಿಲ್ಲ, ಇತ್ತ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಲಿಲ್ಲ. ಕೆಎಲ್ ರಾಹುಲ್ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಇದರ ಪರಿಣಾಮ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 0-1 ಹಿನ್ನಡೆ ಅನುಭವಿಸಿದೆ.

ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್‌ನಿಂದ 186 ರನ್ ಸಿಡಿಸಿ ಆಲೌಟ್ ಆಗಿತ್ತು. ಹೀಗಾಗಿ 187 ರನ್ ಸುಲಭ ಟಾರ್ಗೆಟ್ ಪಡೆದ ಬಾಂಗ್ಲಾದೇಶ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯಿತು. ಆದರೆ ಟಾರ್ಗೆಟ್ ಚೇಸಿಂಗ್ ಅಷ್ಟು ಸುಲಭವಾಗಿರಲಿಲ್ಲ. ಮೊದಲ ಎಸೆದಲ್ಲೇ ನಜ್ಮುಲ್ ಹುಸೈನ್ ವಿಕೆಟ್ ಪತನಗೊಂಡಿತು. ನಜ್ಮುಲ್ ಡಕೌಟ್ ಆದರು. ನಾಯಕ ಲಿಟ್ಟನ್ ದಾಸ್ ಹಾಗೂ ಅನಾಮುಲ್ ಹಕ್ ಜೊತೆಯಾಟಕ್ಕೆ ಬಾಂಗ್ಲಾದೇಶ ಚೇತರಿಸಿಕೊಂಡಿತು. ಲಿಟ್ಟನ್ ದಾಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು ಆದರೆ ಅನಾಮುಲ್ ಹಕ್ 14 ರನ್ ಸಿಡಿಸಿ ಔಟಾದರು.
ಶಕೀಬ್ ಅಲ್ ಹಸನ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಲಿಟ್ಟನ್ ದಾಸ್ ಬಾಂಗ್ಲಾದೇಶಕ್ಕೆ ಆಸರೆಯಾದರು. 63 ಎಸೆತದಲ್ಲಿ 41 ರನ್ ಸಿಡಿಸಿ ಲಿಟ್ಟನ್ ದಾಸ್, ವಾಶಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ತಂಡಕ್ಕೆ ಚೇತರಿಕೆ ನೀಡಿದ್ದ ಶಕೀಬ್ ಅಲ್ ಹಸನ್ 29 ರನ್ ಸಿಡಿಸಿ ಔಟಾದರು.
ಮುಶ್ಫಿಕರ್ ರಹೀಮ್ ಹಾಗೂ ಮಹಮ್ಮದುಲ್ಲಾ ಜೊತೆಯಾಟದಿಂದ ಬಾಂಗ್ಲಾದೇಶ ಚೇತರಿಕೆ ಕಂಡಿದೆ. ಸುಲಭ ಟಾರ್ಗೆಟ್ ಕಾರಣ ಬಾಂಗ್ಲಾದೇಶದ ಮೇಲೆ ಹೆಚ್ಚಿನ ಆತಂಕಕ್ಕೆ ಒಳಗಾಗಲಿಲ್ಲ. ಗುರಿಯತ್ತ ಸಾಗುತ್ತಿದ್ದ ಬಾಂಗ್ಲಾದೇಶಕ್ಕೆ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. ಮೊಹಮ್ಮದುಲ್ಲಾ 14 ರನ್ ಸಿಡಿಸಿ ಔಟಾದರು. ಈ ವಿಕೆಟ್ ಪತನ ಬಾಂಗ್ಲಾದೇಶದ ಆತಂಕ ಹೆಚ್ಚಿಸಿತು.
ಆಫಿಫ್ ಹೂಸೈನ್ ಕೇವಲ 6 ರನ್ ಸಿಡಿಸಿ ಔಟಾದರು. ಸುಲಭ ಟಾರ್ಗೆಟ್ ಪಡೆದರೂ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಬಾದತ್ ಹುಸೈನ್ ಡಕೌಟ್ ಆದರು. 135 ರನ್‌ಗಳಿಗೆ ಬಾಂಗ್ಲಾದೇಶ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹಸನ್ ಮೊಹಮ್ಮದ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಆದರೆ ಮುಸ್ತಾಫಿಜುರ್ ರೆಹಮಾನ್ ಹಾಗೂ ಮೆಹದಿ ಹಸನ್ ಮಿರಾಜ್ ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಇದು ಟೀಂ ಈಂಡಿಯಾ ತಲೆನೋವಿಗೆ ಕಾರಣವಾಯಿತು. ಮೆಹದಿ ಹಸನ್ ಕಬಳಿಸಲು ಭಾರತೀಯ ಬೌಲರ್ಸ್ ಹರಸಾಹಸ ಮಾಡಿದರು. ಆದರೆ ಪ್ರಯೋಜನವಾಗಲಿಲ್ಲ. 1 ಎಸೆತ ಬಾಕಿ ಇರುವಂತೆ ಬಾಂಗ್ಲಾದೇಶ 1 ವಿಕೆಟ್ ರೋಚಕ ಗೆಲುವು ಸಾಧಿಸಿತು. ಮೆಹದಿ ಹಸನ್ ಅಜೇಯ 37 ರನ್ ಸಿಡಿಸಿದರು.
