ಮೈಸೂರು:– ರಾಜಕೀಯಕ್ಕೆ ಬರುವ ವಿಚಾರದಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ ಎಂದು ಡಾ ಸಿಎನ್ ಮಂಜುನಾಥ್ ಹೇಳಿದ್ದಾರೆ.
ಜನ ಹಾಗೂ ಮಾಧ್ಯಮದವರು ನನ್ನ ಮೇಲಿನ ಪ್ರೀತಿಯಿಂದ ನನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕಾರಣಕ್ಕೆ ಬರಬೇಕೋ ಬೇಡವೋ ಎನ್ನುವ ಗೊಂದಲವಿದೆ. ಹಾಗಂತ ರಾಜಕೀಯಕ್ಕೆ ಬರಲು ಭಯ ಪಡುತ್ತಿದ್ದೇನೆ ಎಂದು ಅರ್ಥವಲ್ಲ. ರಾಜಕೀಯ ಹೊಸ ಕ್ಷೇತ್ರ, ಹೇಗೋ ಏನೋ ಎಂದು ನೋಡಬೇಕು. ಹಾಗಾಗಿ ಈ ಬಗ್ಗೆ ಸದ್ಯಕ್ಕೆ ನಾನು ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟನೆ ನಿಡಿದ್ದಾರೆ.
ಜಯದೇವದಲ್ಲಿ ಮಾಡಿದ ಒಳ್ಳೆಯ ಕೆಲಸದ ನೀರಿಕ್ಷೆಯಲ್ಲೇ ಈ ಒತ್ತಾಯಗಳು ಕೇಳಿ ಬರುತ್ತಿವೆ. ನನಗೆ ಬೀದಿ ರಾಜಕೀಯ ಇಷ್ಟ ಇಲ್ಲ. ಅಭಿವೃದ್ಧಿಯ ಪಾಲಿಟಿಕ್ಸ್ ಬಗ್ಗೆ ಆಸಕ್ತಿ ಇದೆ ಎಂದು ಹೇಳಿದ್ದಾರೆ.
ಇನ್ನೂ ಮಂಜುನಾಥ್ ಅವರು ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ಮಂಜುನಾಥ್ ಮನವೊಲಿಕೆಗೆ ಜೆಡಿಎಸ್ ನಾಯಕರು ಮುಂದಾಗಿದ್ದರು. ಜತೆಗೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಸ್ಪರ್ಧಿಸುವಂತೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದವು.
ಮಂಜುನಾಥ್ ಅವರಿಗೆ ಈಗಾಗಲೇ ರಾಜಕೀಯ ಹಿನ್ನೆಲೆ ಇದೆ. ಅವರು ಶ್ರವಣಬೆಳಗೊಳದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಹೋದರ. ಅವರ ಪತ್ನಿ ಅನಸೂಯಾ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಹಿರಿಯ ಪುತ್ರಿ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈ ಬಾರಿ ಗೆಲುವು ಕಷ್ಟವಾಗಬಹುದು ಎಂದು ಪಕ್ಷದ ಮೂಲಗಳು ಹೇಳುತ್ತಿದ್ದು, ಕುಟುಂಬದ ಹಿರಿಮೆಗೆ ಮಂಜುನಾಥ್ ಅವರ ಹೆಸರು ಕೇಳಿಬರುತ್ತಿವೆ.