ಗದಗ: ಮೆಣಸಿನಕಾಯಿಯನ್ನು ಕದ್ದ ಕಳ್ಳರಿಬ್ಬರಿಗೆ ಗ್ರಾಮಸ್ಥರು ಕದ್ದ ಮೆಣಸಿನಕಾಯಿಯನ್ನು ತಿನ್ನುವಂತೆ ಒತ್ತಾಯಿಸಿ, ಹಿಗ್ಗಾಮುಗ್ಗ ಧರ್ಮದೇಟು ನೀಡಿರುವ ಅಮಾನವೀಯ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಣ್ಣ ಅಂಗಡಿ ಹಾಗೂ ಮಂಜುನಾಥ ಗೌಡರ ಮೆಣಸಿನಕಾಯಿ ಕದ್ದ ಕಳ್ಳರು. ಮೆಣಸಿನಕಾಯಿಯನ್ನು ಕದ್ದಿರುವ ವಿಚಾರ ತಿಳಿಯುತ್ತಲೇ ಗ್ರಾಮಸ್ಥರು ಅವರಿಬ್ಬರನ್ನು ಹಿಡಿದು, ಕದ್ದ ಮೆಣಸಿನಕಾಯಿ ಮೂಟೆಯನ್ನು ಹೊರಿಸಿ,
ಊರಿಡೀ ಮೆರವಣಿಗೆ ಮಾಡಿದ್ದಾರೆ. ಬಳಿಕ ಇಬ್ಬರಿಗೂ ಕದ್ದ ಮೆಣಸಿನಕಾಯಿಗಳನ್ನು ಸ್ಥಳದಲ್ಲೇ ತಿನ್ನುವಂತೆ ಒತ್ತಾಯಿಸಿದ್ದಾರೆ. ತಿನ್ನದೇ ಹೋದರೆ ಪೊಲೀಸರಿಗೆ ಕಂಪ್ಲೆಂಟ್ ಕೊಡುವುದಾಗಿ ಎಚ್ಚರಿಸಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ತಮ್ಮನ್ನು ಬಿಟ್ಟುಬಿಡುವಂತೆ ಗ್ರಾಮಸ್ಥರಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ.
ಇಷ್ಟಾದರೂ ಬಿಡದ ಗ್ರಾಮಸ್ಥರು ಇಬ್ಬರಿಗೂ ಧರ್ಮದೇಟು ನೀಡಿ, ಕಂಬಕ್ಕೆ ಕಟ್ಟಿಹಾಕಿ, ಹಿಗ್ಗಾಮುಗ್ಗ ಥಳಿಸಿದ್ದಾರೆ. ಗ್ರಾಮಸ್ಥರು ಅಮಾನವೀಯವಾಗಿ ವರ್ತಿಸಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.