ಬೆಂಗಳೂರು : ದೇಶಕ್ಕಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರ ಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ ವಾಗ್ದಾನದಂತೆ ಸಹಾಯಾರ್ಥವಾಗಿ 50 ಲಕ್ಷ ಚೆಕ್ ಇಂದು ಜಿಲ್ಲಾಡಳಿತದ ಮೂಲಕ ಹಸ್ತಾಂತರ ಮಾಡಿದೆ.
ಕ್ಯಾಪ್ಟನ್ ಪ್ರಾಂಜಲ್ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹುತಾತ್ಮ ವೀರ ಸೇನಾನಿ ಕುಟುಂಬಕ್ಕೆ 50 ಲಕ್ಷ ರಾಜ್ಯ ಸರ್ಕಾರದಿಂದ ಸಹಾಯಾರ್ಥವಾಗಿ ನೀಡುವುದಾಗಿ ಘೋಷಣೆ ಮಾಡಿದ್ದರು. ಕೊಟ್ಟ ಮಾತಿನಂತೆ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ್, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ನಿರ್ದೆಶಕರು ಶಶಿಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ನಂದನವನ ಬಡಾವಣೆಯಲ್ಲಿರುವ ಹುತಾತ್ಮ ಯೋಧ ಪ್ರಾಂಜಲ್ ಪೋಷಕರ ನಿವಾಸಕ್ಕೆ ಆಗಮಿಸಿ ರಾಜ್ಯ ಸರ್ಕಾರದ ಪರವಾಗಿ ಚೆಕ್ ಹಸ್ತಾಂತರ ಮಾಡಿದ್ದಾರೆ. ಪ್ರಾಂಜಲ್ ತಾಯಿ ಅನುರಾಧ ಮತ್ತು ಪತ್ನಿ ಅದಿತಿ ರವರೆಗೆ ತಲಾ 25 ಲಕ್ಷ ಚೆಕ್ ಹಸ್ತಾಂತರ ಮಾಡಿದ್ದಾರೆ.
ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಮಾಧ್ಯಮಗಳೊಂದಿಗೆ ಮಾತನಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ವೀರಯೋಧ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಸರ್ಕಾರದಿಂದ ಸಹಾಯಾರ್ಥವಾಗಿ 50 ಲಕ್ಷ ಚೆಕ್ ವಿತರಣೆ ಇಂದು ಮಾಡಲಾಗಿದೆ. ದೇಶಸೇವೆ ಎನ್ನುವುದು ಅತಿದೊಡ್ಡ ಕಾಯಕವಾಗಿದ್ದು, ಯುವ ಸಮುದಾಯಕ್ಕೆ ಹುತಾತ್ಮ ಯೋಧ ಪ್ರಾಂಜಲ್ ಮಾದರಿಯಾಗಿದ್ದಾರೆ. ನಮ್ಮ ದೇಶ ನಾಮ್ಮ ನಾಡಿಗೆ ಪ್ರಾಣ ಮುಡಿಪು ಎನ್ನುವಂತಹರಿಗೆ ಪ್ರಾಂಜಲ್ ಪ್ರೇರಣೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನೂ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ತಂದೆ ವೆಂಕಟೇಶ್ ಮಾತನಾಡಿ ಇಂದಿಗೆ ಪ್ರಾಂಜಲ್ ಹುತಾತ್ಮನಾಗಿ 14 ದಿನ ಆಗಿದೆ. ನವಂಬರ್ 22 ರಂದ ಉಗ್ರರ ವಿರುದ್ಧ ಎನ್ಕೌಂಟರ್ನಲ್ಲಿ ವೀರಮರಣ ಹೊಂದಿದನು. ನಮ್ಮ ಕುಟುಂಬದವರ ಅಶಯದಂತೆ ಅಂತಿಮ ವಿಧಿವಿಧಾನ ನಡೆಸಲಾಗಿದೆ.ಪ್ರಾಂಜಲ್ ಅಂತಿಮ ವಿದಾಯದಂದು ಸೇನೆ ಜಿಲ್ಲಾಡಳಿತ ಸೇರಿದಂತೆ ಎಲ್ಲರ ನೆರವು ಮರೆಯಲಾಗದು. ಅಭೂತಪೂರ್ವ ಅಂತಿಮೆಯಾತ್ರೆ ಮೆರವಣಿಗೆ ಆಯೋಜಿಸಿ ಪ್ರಾಂಜಲ್ ಗೆ ನಿಜ ಗೌರವ ಸಿಕ್ಕಿದೆ. ಹಾಗಾಗಿ ನಮ್ಮ ಕುಟುಂಬದವರ ಪರವಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಭಾವುಕರಾಗಿದ್ದಾರೆ.