ಸಾಫ್ಟ್ ಪೋರ್ನ್ ಸಿನಿಮಾದಲ್ಲಿ ಭಾರತೀಯ ಸೈನಿಕನ ಪಾತ್ರ ಬಳಸಿದ್ದಕ್ಕಾಗಿ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ. ಈ ಬೆನ್ನಲ್ಲೇ ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂಬ ಆರೋಪದ ಮೇಲೆ ಏಕ್ತಾ ಕಪೂರ್ ವಿರುದ್ಧ ದೂರು ದಾಖಲಾಗಿದೆ.
ಕಿರುತೆರೆಯ ಕಿಂಗ್ ಮೇಕರ್ ಎಂದೇ ಖ್ಯಾತಿ ಘಳಿಸಿರುವ ಏಕ್ತಾ ಕಪೂರ್ ಹಲವಾರು ಟಿವಿ ಧಾರಾವಾಹಿಗಳ ನಿರ್ಮಾಪಕಿಯೂ ಹೌದು. ಆಲ್ಟ್ ಬಾಲಾಜಿ ಹೆಸರಿನ ಒಟಿಟಿಯನ್ನೂ ಸಹ ನಡೆಸುತ್ತಿದ್ದಾರೆ. ಆಲ್ಟ್ ಬಾಲಾಜಿ ಒಟಿಟಿಯಲ್ಲಿ ಸಾಫ್ಟ್ ಪಾರ್ನ್ ರೀತಿಯ ವೆಬ್ ಸರಣಿ, ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ರೀತಿಯ ವೆಬ್ ಸೀರೀಸ್ ನಲ್ಲಿ ಸೈನಿಕನ ಪಾತ್ರವನ್ನು ಬಳಸಿಕೊಂಡು ಸಮವಸ್ತ್ರದಲ್ಲಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು.
ಸೈನಿಕನಿಗೆ ಅವಮಾನ ಮಾಡಲಾಗಿದೆ ಎಂದು ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಪೊಲೀಸ್ ಠಾಣೆಗೆ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ರಿಜಿಸ್ಟರ್ ಮಾಡಿಕೊಂಡಿದ್ದರು. ಆದರೆ ವಿಚಾರಣೆ ನಡೆಸಿರಲಿಲ್ಲ. ಇದೀಗ ನ್ಯಾಯಾಲಯ ಮಧ್ಯಪ್ರವೇಶ ಮಾಡಿದ್ದು, ಪೊಲೀಸರಿಗೆ ಸೂಚನೆ ನೀಡಿ ಏಕ್ತಾ ಕಪೂರ್ ವಿಚಾರಣೆ ನಡೆಸಿ, ಮೇ 9ರ ಒಳಗಾಗಿ ವರದಿ ನೀಡುವಂತೆ ಸೂಚನೆ ನೀಡಿದೆ.
ಸೆಕ್ಷನ್ 202 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಏಕ್ತಾ ಕಪೂರ್ ವಿಚಾರಣೆ ನಡೆಸಿರಲಿಲ್ಲ. ಏಕ್ತಾ ಕಪೂರ್ ಮಾತ್ರವೇ ಅಲ್ಲದೆ, ಆಲ್ಟ್ ಬಾಲಾಜಿಯ ಇತರೆ ಸಹ ಮಾಲೀಕರು, ಆ ವೆಬ್ ಸರಣಿಯ ನಿರ್ದೇಶಕರು ಇನ್ನೂ ಕೆಲವರ ವಿರುದ್ಧ ದೂರು ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆಯಾಗಿ, ಏಕ್ತಾ ಕಪೂರ್ ಅವರ ವಕೀಲ ರಿಜ್ವಾನ್ ಸಿದ್ದಿಕಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ, ಪೊಲೀಸರು 2020 ರಲ್ಲಿ ದೂರನ್ನು ಈಗಾಗಲೇ ಮುಕ್ತಾಯಗೊಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ನ್ಯಾಯಾಲಯವು ದೂರನ್ನು ಗಮನಕ್ಕೆ ತೆಗೆದುಕೊಂಡಿಲ್ಲ, ಆದರೆ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಾಥಮಿಕ ತನಿಖೆಯನ್ನು ಮಾತ್ರ ಕೋರಿದೆ ಎಂದು ಅವರು ಒತ್ತಿ ಹೇಳಿದರು. ನನ್ನ ಕಕ್ಷಿದಾರರು ತಪ್ಪು ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳ ಜೊತೆಗೆ 100 ಕೋಟಿ ರೂಪಾಯಿಗಳ ನಾಗರಿಕ ಮಾನನಷ್ಟ ಮೊಕದ್ದಮೆ ಹೂಡಲು ಯೋಚಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.