ನಮ್ಮ ದೇಶದಲ್ಲಿ ಸಾಕಷ್ಟು ದೇವಾಲಯಗಳನ್ನು ನಾವು ನೋಡಬಹುದು. ಅದರಲ್ಲೂ ದಕ್ಷಿಣ ಭಾರತದಲ್ಲಂತೂ ದೇವಾಲಯಗಳಿಗೆ ಲೆಕ್ಕವೇ ಇಲ್ಲವೆನ್ನಬಹುದು. ಇಲ್ಲಿನ ಪ್ರತಿಯೊಂದು ದೇವಾಲಯವು ಒಂದೊಂದು ಐತಿಹಾಸಿಕ ಹಿನ್ನೆಲೆಯನ್ನು, ನಿಗೂಢತೆಯನ್ನು ಪಡೆದುಕೊಂಡಿದೆ. ಹಾಗೇ ಇಲ್ಲೊಂದು ದೇವಾಲಯವಿದೆ. ಇದು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು. ಇದರ ರಹಸ್ಯವನ್ನು ಹೊರಹಾಕಲು ಬ್ರಿಟಿಷರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಯಾವುದು ಗೊತ್ತಾ ಆ ದೇವಾಲಯ..?
ಈ ದೇವಾಲಯವು ಪ್ರಾಚೀನ ಕಾಲದಿಂದ ಇಂದಿನವರೆಗೂ ಜನರಲ್ಲಿ ಕುತೂಹಲವನ್ನು ಕೆರಳಿಸುತ್ತಲೇ ಇದೆ. ಸಾಮಾನ್ಯವಾಗಿ ಈ ದೇವಾಲಯದ ಬಗ್ಗೆ ಕೇಳಿದವರಿಗೆಲ್ಲರಿಗೂ ಒಮ್ಮೆಯಾದರೂ ನಾನು ಆ ರಹಸ್ಯಗಳನ್ನು ನೋಡಬೇಕೆಂದೆನಿಸುವುದು ಸರ್ವೇ ಸಾಮಾನ್ಯ. ಇದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿಯ ನೇತಾಡುವ ಸ್ತಂಭಗಳ ದೇವಾಲಯವಾಗಿದೆ (Hanging Pillar Temple). ಇದನ್ನು ಸುಮಾರು 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಶಿವ, ವಿಷ್ಣು ಹಾಗೂ ವೀರಭದ್ರ ದೇವರನ್ನು ಪೂಜಿಸಲಾಗುತ್ತದೆ. ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ದೇವಾಲಯದ ರಹಸ್ಯವೇನು ಗೊತ್ತಾ..?

ವಿಜಯನಗರ ವಾಸ್ತುಶಿಲ್ಪದೊಂದಿಗೆ ನಿರ್ಮಿಸಲಾದ ಈ ದೇವಾಲಯವು ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ತನ್ನ ನೇತಾಡುವ ಕಂಭಗಳ ಮೂಲಕ. ಹೌದು ಈ ದೇವಾಲಯದ ಪ್ರಮುಖ ಆಕರ್ಷಣೀಯ ಬಿಂದುವೇ ಈ ಕಂಭವಾಗಿದೆ. ಆಂದ್ರಪ್ರದೇಶದಲ್ಲಿನ ಈ ಲೇಪಾಕ್ಷಿ ದೇವಾಲಯವು ಬರೋಬ್ಬರಿ 70 ಕಂಭಗಳ ಮೇಲೆ ನಿಂತಿದೆ. ಆದರೆ ಈ 70 ಕಂಭಗಳಲ್ಲಿ ಒಂದು ಕಂಭವು ನೆಲವನ್ನು ಸ್ಪಶೀಸುವುದಿಲ್ಲ ಎನ್ನುವುದೇ ನಿಗೂಢ.
ಈ ಸ್ತಂಭವು ಗಾಳಿಯಲ್ಲಿ ತೇಲಾಡುತ್ತಲೇ ಇರುತ್ತದೆ ಎನ್ನಲಾಗಿದೆ. ಬ್ರಿಟಿಷ್ ಆಳ್ವಿಕೆಯಲ್ಲಿ ಅವರು ಈ ದೇವಾಲಯದ ಕಂಭಗಳ ರಹಸ್ಯವನ್ನು ಬೇಧಿಸಲು ಹೋಗಿ ವಿಫಲರಾಗಿದ್ದಾರೆ. ಈ ದೇವಾಲಯವನ್ನು ‘ಹ್ಯಾಂಗಿಂಗ್ ಟೆಂಪಲ್’ ಎಂದೂ ಕೂಡ ಕರೆಯಲಾಗುತ್ತದೆ. ಈ ನೇತಾಡುವ ಸ್ತಂಭದಿಂದ ಈ ದೇವಾಲಯಕ್ಕೆ ಹ್ಯಾಂಗಿಂಗ್ ಟೆಂಪಲ್ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ. ಈ ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಭಿನ್ನ ಅಭಿಪ್ರಾಯಗಳಿವೆ. ಶಿವನ ರೌಧ್ರಾವತಾರ ಅಥವಾ ವೀರಭದ್ರ ಅವತಾರದ ಪ್ರತೀಕವಾಗಿ ಈ ದೇವಾಲಯದಲ್ಲಿ ಸ್ವಯಂಭು ಶಿವಲಿಂಗವನ್ನು ನೋಡಬಹುದಾಗಿದೆ.
ಕೆಲವೊಂದು ಮಾಹಿತಿಯ ಪ್ರಕಾರ, ಈ ಶಿವಲಿಂಗವು 15ನೇ ಶತಮಾನದ ವರೆಗೂ ಸೂರಿಲ್ಲದೇ ಇದ್ದಿತ್ತು. ಅಂದರೆ ಈ ಶಿವಲಿಂಗಕ್ಕೆ ಯಾವುದೇ ರೀತಿಯ ಮೇಲ್ಚಾವಣಿಯಿರಲಿಲ್ಲ. ತದನಂತರ ಸುಮಾರು 1538 ರಲ್ಲಿ ವಿಜಯನಗರ ರಾಜನೊಂದಿಗೆ ಕೆಲಸ ಮಾಡುತ್ತಿದ್ದ ವಿರೂಪಣ್ಣ ಮತ್ತು ವೀರಣ್ಣ ಈ ಇಬ್ಬರು ಸಹೋದರರು ಈ ದೇವಾಲಯವನ್ನು ನಿರ್ಮಿಸಿದ್ದಾರೆಂದು ಹೇಳಲಾಗಿದೆ. ಇನ್ನು ಕೆಲವೊಂದು ಪೌರಾಣಿಕ ನಂಬಿಕೆಗಳ ಪ್ರಕಾರ, ಅದೇ ಸಮಯದಲ್ಲಿ ಲೇಪಾಕ್ಷಿ ದೇವಾಲಯದ ಸಂಕೀರ್ಣದಲ್ಲಿರುವ ವೀರಭದ್ರ ದೇವಾಲಯವನ್ನು ಅಗಸ್ಥ್ಯ ಋಷಿ ನಿರ್ಮಿಸಿದ್ದಾನೆಂಬ ನಂಬಿಕೆಯಿದೆ.