ಡಾರ್ಲಿಂಗ್ ಪ್ರಭಾಸ್ (Prabhas) ನಟನೆಯ ಬಹುನಿರೀಕ್ಷಿತ ‘ಸಲಾರ್’ (Salaar) ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅದರಲ್ಲೂ ಪ್ರಭಾಸ್ ಖಡಕ್ ಲುಕ್, ಪೃಥ್ವಿರಾಜ್ ರಗಡ್ ಡೈಲಾಗ್ ಎಲ್ಲವೂ ಟ್ರೈಲರ್ನ ಹೈಲೈಟ್ ಆಗಿದೆ. ಚಿತ್ರದಲ್ಲಿ ಕನ್ನಡದ ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು, ಶ್ರುತಿ ಹಾಸನ್ ಸೇರಿದಂತೆ ಅನೇಕರು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಬಹುಭಾಷೆಗಳಲ್ಲಿ ‘ಸಲಾರ್’ ರಿಲೀಸ್ ಆಗುತ್ತಿದೆ.
ಸಲಾರ್ ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪ್ರಶಾಂತ್ ನೀಲ್ ಈ ಹಿಂದೆ ಕನ್ನಡದಲ್ಲಿ ಮಾಡಿದ್ದ ಉಗ್ರಂ ಸಿನಿಮಾವನ್ನೇ ಕೊಂಚ ಬದಲಿಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಪ್ರಶಾಂತ್ ಮಾತನಾಡಿದ್ದಾರೆ.
ಇದು ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟ ಪಡಿಸಿದರುವ ಅವರು, ಸ್ನೇಹಿತರಿಬ್ಬರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ ಎಂದಿದ್ದಾರೆ. ಈ ಇಬ್ಬರ ಜರ್ನಿಯನ್ನು ಎರಡು ಭಾಗವಾಗಿ ತೋರಿಸಲಾಗುವುದು ಎಂದು ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸದ್ಯ ಚಿತ್ರೋದ್ಯಮದಲ್ಲಿ ಇವೆಂಟ್ ಟ್ರೆಂಡ್ ಹೆಚ್ಚಾಗಿದೆ. ಪೋಸ್ಟ್ ರಿಲೀಸ್ ಇವೆಂಟ್, ಪ್ರಿರಿಲೀಸ್ ಇವೆಂಟ್ ಹೀಗೆ ಜನರನ್ನು ಸೇರಿಸುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಇಂಥದ್ದೊಂದು ಯಾವುದೇ ಇವೆಂಟ್ ಸಲಾರ್ ಚಿತ್ರಕ್ಕಾಗಿ ಮಾಡುತ್ತಿಲ್ಲ ಎನ್ನುವ ವಿಷಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಯಾವುದೇ ಇವೆಂಟ್ ಮಾಡದೇ, ಟ್ರೈಲರ್ ಬಿಡುಗಡೆ ನಂತರ ನೇರವಾಗಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆಯಂತೆ ಹೊಂಬಾಳೆ ಸಂಸ್ಥೆ.