ಮಂಡ್ಯ :- ಜಿಲ್ಲೆಯ ವಿವಿಧೆಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಗಮನವನ್ನು ಬೇರೆಡೆ ಸೆಳೆದು ಚಿನ್ನದ ಸರ ಎಗರಿಸುತ್ತಿದ್ದ ಸರಗಳ್ಳರ ಜಾಲವೊಂದನ್ನು ಹೆಡೆಮುರಿ ಕಟ್ಟುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಸಂಬಂಧ ಆರೋಪಿ ಬೀದರ್ ನ ಜಾವೇದ್ ಬಾಲಿ ಜಾಫ್ರಿಯನ್ನು (39) ಬಂಧಿಸಿ ಆರೋಪಿಯಿಂದ 435.5 ಗ್ರಾಂ ಚಿನ್ನ, ಮಾಂಗಲ್ಯ ಸರಗಳು ಹಾಗೂ ಹುಂಡೈ ಐ 10 ಕಾರು ಸೇರಿ ಒಟ್ಟು 27 ಲಕ್ಷದ 30 ಸಾವಿರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮೂಲತಃ ಮಹಾರಾಷ್ಟ್ರದವರಾಗಿದ್ದು, ಬೀದರ್ ನಗರದಲ್ಲಿ ವಾಸವಿದ್ದು, ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಸರಗಳ್ಳತನ ನಡೆಸಿ ಮತ್ತೆ ಬೀದರ್ ಗೆ ಪರಾರಿಯಾಗುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮದ್ದೂರು ಟೌನ್ ಎಸ್.ಬಿ.ಎಂ ರಸ್ತೆಯಲ್ಲಿ ನ.16 ರಂದು ಹಾಡುಹಗಲೇ ಕೆಂಪಮ್ಮ ಎಂಬ ವೃದ್ಧೆಯ 62 ಗ್ರಾಂ ತೂಕದ ಚಿನ್ನದ ಸರವನ್ನು ಇಬ್ಬರು ಸರಗಳ್ಳರು ಅಪಹರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಳವಳ್ಳಿ ಉಪ ವಿಭಾಗಾಧಿಕಾರಿ ಕೃಷ್ಣಪ್ಪ, ಮದ್ದೂರು ವೃತ್ತ ನಿರೀಕ್ಷಕ ಶಿವಕುಮಾರ್, ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗಾಗಿ ಅಪರ ಪೋಲೀಸ್ ಅಧೀಕ್ಷಕ ತಿಮ್ಮಯ್ಯ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ ಅವರುಗಳ ಮಾರ್ಗದರ್ಶನದಲ್ಲಿ ಮದ್ದೂರು ಗ್ರಾಮಾಂತರ ಸಿಪಿಐ ವೆಂಕಟೇಗೌಡ, ಕೆರಗೋಡು ವೃತ್ತದ ಸಿಪಿಐ ಎನ್.ವಿ.ಮಹೇಶ್, ಮದ್ದೂರು ಠಾಣಾ ಪಿಐ ಶಿವಕುಮಾರ್ ಅವರ ನೇತೃತ್ವದಲ್ಲಿ ಪಿಎಸ್ಐ ಗಳಾದ ನರೇಶ್ ಕುಮಾರ್, ಮಂಜುನಾಥ್, ರವಿ ಮತ್ತು ಸಿಬ್ಬಂದಿಗಳಾದ ಗುರುಪ್ರಸಾದ್, ರಿಯಾಜ್ ಪಾಷ, ಪ್ರಭುಸ್ವಾಮಿ, ಪ್ರಶಾಂತ್, ಚಿರಂಜೀವಿ, ಸಿದ್ದೇಗೌಡ, ವಿಠಲ್, ವಿಷ್ಣುವರ್ಧನ್, ರವಿಕಿರಣ್, ಲೋಕೇಶ್ ಅವರ ತಂಡವನ್ನು ರಚಿಸಲಾಗಿತ್ತು.
ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ವಿಶೇಷ ತಂಡ ಸತತವಾಗಿ ಕಾರ್ಯಾಚರಣೆ ನಡೆಸಿ ಬೀದರ್ ನಗರದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಜಾವೇದ್ ಬಾಲಿ ಜಾಫ್ರಿಯನ್ನು ನ.19 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತಿಬ್ಬರ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ವೇಳೆ ಮೂವರು ಆರೋಪಿಗಳು ಸೇರಿ ಮದ್ದೂರು 1, ಬೆಸಗರಹಳ್ಳಿ 3, ಕೆ.ಎಂ.ದೊಡ್ಡಿ 3, ಬಸರಾಳು 1, ಶಿವಳ್ಳಿ 1, ಮಂಡ್ಯ ಪಶ್ಚಿಮ 1, ರಾಮನಗರದ ಐಜೂರು ಪೋಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿ 11 ಪ್ರಕರಣಗಳು ಬೆಳಕಿಗೆ ಬಂದಿವೆ.
ಇನ್ನು ಕಾರ್ಯಾಚರಣೆ ಕೈಗೊಂಡಿದ್ದ ಮದ್ದೂರು ಗ್ರಾಮಾಂತರ ವೃತ್ತ ಹಾಗೂ ಮದ್ದೂರು ಪೋಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ಯತೀಶ್ ಶ್ಲಾಘಿಸಿ ಪ್ರಶಂಸಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ