ಥಾಣೆ: ಪತ್ನಿಗೆ ಥಳಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಇಬ್ಬರು ಸಂಬಂಧಿಕರ ಮೇಲೆ ಪೊಲೀಸರು ಎಫ್‍ಐಆರ್ (FIR) ದಾಖಲಿಸಿದ ಘಟನೆ ನವಿಮುಂಬೈನಲ್ಲಿ (Navi Mumbai) ನಡೆದಿದೆ. 23 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಈ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಫ್ಯಾಶನ್ ಬಳೆಯನ್ನು ತೊಟ್ಟಿದ್ದಕ್ಕೆ ಪತಿ 30 ವರ್ಷದ ಪ್ರದೀಪ್ ಅರ್ಕಾಡೆಯು ಪತ್ನಿಗೆ ಬೆಲ್ಟ್ ನಲ್ಲಿ ಹಿಗ್ಗಾಮುಗ್ಗವಾಗಿ ಥಳಿಸಿದ್ದಾನೆ. ನವೆಂಬರ್ 13 ರಂದು 50 ವರ್ಷದ ಅತ್ತೆ ಮಹಿಳೆಯ ಕೂದಲನ್ನು ಎಳೆದು ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಪತಿ ಕೂಡ ಬೆಲ್ಟ್ ನಿಂದ ಥಳಿಸಿದ್ದಾನೆ. ಅಲ್ಲದೆ ಥಳಿಸುವ ಮುನ್ನ ಅತ್ತೆ ನೆಲಕ್ಕೆ ತಳ್ಳಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ನಂತರ ಸಂತ್ರಸ್ತೆ ಪುಣೆಯಲ್ಲಿರುವ ತನ್ನ ಪೋಷಕರ ಮನೆಗೆ ಹೋಗಿ ಅಲ್ಲಿ ದೂರು ದಾಖಲಿಸಿದರು. ನಂತರ ಪ್ರಕರಣವನ್ನು ನವಿ ಮುಂಬೈಗೆ ತನಿಖೆಗಾಗಿ ವರ್ಗಾಯಿಸಲಾಯಿತು ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 34 (ಸಾಮಾನ್ಯ ಉದ್ದೇಶ), 504 (ಉದ್ದೇಶವನ್ನು ಉಲ್ಲಂಘಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

