ದಾವಣಗೆರೆ: ದಾವಣಗೆರೆಯ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತ ಅಯುಬ್ ಪೈಲ್ವಾನ್ ಸೇರಿದಂತೆ ಆತನ ಕುಟುಂಬಸ್ಥರು ಪೊಲೀಸರ ಮೇಲೆಯೇ ದರ್ಪ ತೋರಿದ್ದಾರೆ. ನವೆಂಬರ್ 16 ರಾತ್ರಿ ನಗರದ ಅರಳಿಮರ ವೃತ್ತದಲ್ಲಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಬಳಿಕ ನಗರದಲ್ಲಿನ ಅಂಗಡಿ ಮುಂಗಟ್ಟುಗಳನ್ನ ಮುಚ್ಚುವಂತೆ ನಿಯಮವಿದೆ. ಆದರೆ, ರಾತ್ರಿ 11.30ರ ಸುಮಾರಿನಲ್ಲಿ ಅರಳಿ ವೃತ್ತದಲ್ಲಿ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿಕೊಂಡು ಕೆಲವರು ಯುವಕರು ಕುಳಿತುಕೊಂಡಿದ್ದರು.
ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಬೀಟ್ ಸಿಬ್ಬಂದಿ ಸ್ಥಳಕ್ಕೆ ಬಂದು ಅಂಗಡಿ ಬಂದ್ ಮಾಡಿ ಮನೆಗೆ ತೆರಳುವಂತೆ ಸೂಚನೆಯನ್ನ ನೀಡಿದ್ದಾರೆ. ಅಲ್ಲದೇ, ಬೈಕ್ ನ ಪೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಯುವಕನೊಬ್ಬ ಮನೆಗೆ ತೆರಳದೆ ಬಗ್ಗಿ ತನ್ನ ಹಿಂಭಾಗ ತೋರಿಸಿ ಈ ಪೋಟೋ ತೆಗೆದುಕೊಳ್ಳಿ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೇ, ಸುಮ್ಮನೆ ಹೋಗದಿದ್ದರೆ ತನ್ನ ಸಂಬಂಧಿ ಕರೆಸಿ ಏನು ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಇದೇ ಅವಾಂತರಕ್ಕೆ ಕಾರಣವಾಗಿದೆ. ಬಳಿಕ, ಬೀಟ್ ಸಿಬ್ಬಂದಿ ಕೂಡಲೇ ಆಜಾದ್ ನಗರ ಠಾಣೆಯ ಪಿಎಸ್ ಐ ಇಮ್ರಾನ್ ಬೇಗ್ ಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಅಂಗಡಿ ಮುಚ್ಚುವಂತೆ ಹೇಳಿದ್ದಾರೆ.
ಪಿಎಸ್ ಐ ಇಮ್ರಾನ್ ಬೇಗ್ ಬಂದು ಹೇಳಿದರು ಕೇಳದ ಸಚಿವರ ಆಪ್ತ ಅಯುಬ್ ಪೈಲ್ವಾನ್ ಸೇರಿ ಇತರರು ಪೊಲೀಸರ ಜೊತೆಯೇ ವಾಗ್ವಾದ ನಡೆಸಿದ್ದಾನೆ. ಅಂಗಡಿ ಬಂದ್ ಮಾಡುವುದಿಲ್ಲ ಏನ್ ಮಾಡ್ತಿಯಾ ಮಾಡ್ಕೋ ಹೋಗೋ, ಕೇಸ್ ಮಾಡಿಕೊಳ್ತಿಯಾ ಮಾಡಿಕೋ ಹೋಗು, ನಮ್ಮ ಮನೆಯ ಮುಂದೆ ನಿಲ್ಲಬೇಡ, ಹೇಗೆ ಡ್ಯೂಟಿ ಮಾಡ್ತಿಯಾ ಎಂದು ಪಿಎಸ್ ಐ ಇಮ್ರಾನ್ ಬೇಗ್ ಗೆ ಧಮ್ಕಿ ಹಾಕಿದ್ದಾರೆ.
ಇದೇ ವಿಚಾರಕ್ಕೆ ಪಿಎಸ್ ಐ ಮತ್ತು ಆಯುಬ್ ಪೈಲ್ವಾನ್ ಮಧ್ಯ ಮಾತಿನ ಚಕಮಕಿ ಕೂಡ ನಡೆದಿದೆ. ಇದೀಗ ಪೊಲೀಸರು ಅಯುಬ್ ಪೈಲ್ವಾನ್ ಸೇರಿದಂತೆ ಸಾದಿಕ್ ಪೈಲ್ವಾನ್, ಹಸೇನ್ ಮತ್ತು ಹಸೇನ್ ಎಂಬ ನಾಲ್ವರ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅನುಚಿತ ವರ್ತನೆ ತೋರಿರುವ ಬಗ್ಗೆ ಐಪಿಸಿ ಕಲಂ 341,504,506 ಮತ್ತು 186ರ ಅಡಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.