ಈ ಹಿಂದೆಂದೂ ಕಾಣದ ಬರ ಈ ಬಾರಿ ಬಂದಿದ್ದು ಹಾವೇರಿ ಜಿಲ್ಲೆಯ ರೈತರು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿವೆ ಎಂದು ಹಾವೇರಿ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿವೆ.
ಈ ಕುರಿತಂತೆ ಸಭೆ ನಡೆಸಿದ ರೈತರು ರಾಜ್ಯದಲ್ಲಿರುವ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬಿಡುಗಡೆ ಮಾಡಲಿ ಎಂದು ನೋಡುತ್ತಿದೆ. ಇವೆರಡರ ನಡುವೆ ರೈತನ ಸ್ಥಿತಿ ಬಿಗಡಾಯಿಸಿದೆ ಎಂದು ರೈತರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಜಿಲ್ಲೆಗಳಲ್ಲಿ ಹಾವೇರಿಯ ಸಹ ಒಂದು. ಇತ್ತ ಈ ವರ್ಷ ಪ್ರತಿಶತ 99ರಷ್ಟು ಬಿತ್ತನೆ ಮಾಡಿದ್ದ ಜಿಲ್ಲೆ ಸಹ ಹಾವೇರಿ. ಆದರೆ ಮಳೆರಾಯನ ಮುನಿಸು ರೈತನನ್ನು ಹೈರಾಣಾಗಿಸಿದೆ. ಸರ್ಕಾರ ಹಾವೇರಿ ಜಿಲ್ಲೆಯ ಎಂಟೂ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಆದರೆ ಬರಪೀಡಿತ ಘೋಷಣೆ ಮಾಡಿದ್ದು ಬಿಟ್ಟರೆ ಪರಿಹಾರ ಏನೂ ಬಂದಿಲ್ಲಾ ಎನ್ನುತ್ತಿದ್ದಾರೆ ಹಾವೇರಿ ಜಿಲ್ಲೆಯ ರೈತರು.
ರ್ಕಾರಗಳು ಬರಪೀಡಿತ ಜಿಲ್ಲೆಯಂದು ಘೋಷಣೆ ಮಾಡಿದರೆ ರೈತರು ಬದುಕು ಹಸನಾಗುವುದಿಲ್ಲ. ಬದಲಿಗೆ ರೈತರ ಕಷ್ಟಗಳಿಗೆ ಸ್ಪಂದಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ದ ಇದೀಗ ಪ್ರತಿಭಟನೆಯ ಹಾದಿ ತುಳಿಯಲು ಹಾವೇರಿ ರೈತರು ಮುಂದಾಗಿದೆ. ನವೆಂಬರ್ 28 ರಂದು ಹಾವೇರಿ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ಯೋಜನೆ ರೂಪಿಸಿವೆ. ಸಾವಿರಾರು ರೈತರು ಅಂದು ಜಿಲ್ಲಾಡಳಿತ ಕಚೇರಿಯ ಮುತ್ತಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈತರು ತಿಳಿಸಿದ್ದಾರೆ.