ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸಂಬಂಧ ಹೈಕೋರ್ಟ್ ಛೀಮಾರಿ ಹಾಕಿರುವ ವಿಚಾರಕ್ಕೆ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಮೇಕೆದಾಟು ಪಾದಯಾತ್ರೆಯನ್ನು ʼಓಮಿಕ್ರಾನ್ ಜಾತ್ರೆʼಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಸೋಂಕನ್ನು ನಿರ್ಲಕ್ಷಿಸಿದ ಸರಕಾರಕ್ಕೂ ಚಾಟಿ ಬೀಸಿದೆ. ಕೂಡಲೇ ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು ಎಂದು ಹೇಳಿದರು.
ಇನ್ನೂ ಕೋವಿಡ್ ರಕ್ಕಸ ರೂಪ ಪಡೆದು ವೇಗವಾಗಿ ಹರಡುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರೇ ಪಾಸಿಟವ್ ಆಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಸರಿಯಾಗಿ ಪರೀಕ್ಷೆ ನಡೆಸಿದರೆ ದೊಡ್ಡ ಸಂಖ್ಯೆಯ ಜನರು ಸೋಂಕಿತರಾಗಿರುವುದು ಬಯಲಾಗುತ್ತದೆ. ಹೀಗಾಗಿ ನ್ಯಾಯಾಲಯದಿಂದ ಮತ್ತೆ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಪರಿಸ್ಥಿತಿ ಕೈಮೀರಿದೆ. ಎಚ್ಚರ ತಪ್ಪಿದರೆ ಇರುವ ಆಸ್ಪತ್ರೆಗಳು, ವೈದ್ಯ ವ್ಯವಸ್ಥೆ ಸಾಲುವುದಿಲ್ಲ. ಮತ್ತೊಮ್ಮೆ ಸರಕಾರ ಮುಜುಗರಕ್ಕೆ ಒಳಗಾಗುವುದು ಸರಿಯಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
