ಈ ವರ್ಷ ಮಳೆ ಕೊರತೆಯ ಕಾರಣ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶದ ಹಲವು ಬೆಳೆಗಳು ಸಂಕಷ್ಟದಲ್ಲಿ ಸಿಲುಕಿದೆ. ಕಳೆದ ಮೂರು -ನಾಲ್ಕು ದಶಕಗಳಿಂದ ಮಲೆನಾಡಿನ ರೈತರ ಪ್ರಮುಖ ಬೆಳೆಯಾಗಿ ಸ್ಥಾನ ಪಡೆದುಕೊಂಡಿರುವ ಶುಂಠಿ ಕೃಷಿ ಈ ವರ್ಷ ಸಂಕಷ್ಟದಲ್ಲಿ ಸಿಲುಕಿದೆ. ಕಳೆದ 25 ವರ್ಷಗಳ ಅವಧಿಯಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆ ಕೊರತೆ ಕಂಡವರಿಲ್ಲ. ಮಳೆ ಕೊರತೆ ಮತ್ತು ಬಿರು ಬಿಸಿಲಿನ ಪರಿಣಾಮ ಶುಂಠಿ ಫಸಲಿನ ಮೇಲೆ ಕರಿನೆರಳನ್ನಾವರಿಸಿದೆ.
ಶುಂಠಿ ಬೆಳೆ ಮಳೆಯಾಶ್ರಿತ ಬೆಳೆಯಾಗಿದ್ದು, ಚೆನ್ನಾಗಿ ಭೂಮಿ ತೇವಾಂಶದಿಂದ ಕೂಡಿದ್ದರೆ ಮಾತ್ರ ಶುಂಠಿ ಮಣ್ಣಿನೊಳಗೆ ಚೆನ್ನಾಗಿ ಬಲಿಯುತ್ತದೆ. ಬೇರು ಮಣ್ಣಿನೊಳಗೆ ಚಿಗುರೊಡೆದು ವಿಸ್ತಾರಗೊಂಡರೆ ಉತ್ತಮ ಶುಂಠಿ ಫಸಲು ದೊರೆಯುತ್ತದೆ. ಮಳೆ ಸರಿಯಾಗಿ ಬಿದ್ದರೆ ಮಣ್ಣು ಹದಗೊಂಡು ಶುಂಠಿ ಬೆಳೆಯುತ್ತದೆ. ಕೃತಕ ನೀರಾವರಿ ಎಷ್ಟೇ ಸಮರ್ಪಕವಾಗಿ ನಡೆಸಿದರೂ ಮಣ್ಣು ಮೃದು ಸ್ವರೂಪ ಪಡೆಯದು.

ಅತಿಯಾದ ಬಿಸಿಲಿನ ಹವಾಮಾನ ಶುಂಠಿ ಬೆಳೆಗೆ ಶಾಪವಾಗಿ ಪರಿಣಮಿಸಿದೆ. ಅತ್ಯಂತ ಮುತುವರ್ಜಿಯಿಂದ ಕೃಷಿ ನಡೆಸಿದ ರೈತರ ಹೊಲದಲ್ಲಿ ಸಹ ಶುಂಠಿ ಬೆಳೆಗೆ ಬಗೆ ಬಗೆಯ ರೋಗ ಹರಡುತ್ತಿದೆ.
ಕೆಲವು ರೈತರು ಸರಾಸರಿ 40 ರಿಂದ 50 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆದಿದ್ದಾರೆ. ಆದರೆ, ವಿಪರೀತ ಉಷ್ಣಾಂಶ ಮತ್ತು ಮಳೆ ಕೊರತೆ ಕಾರಣ ಹಸಿರು ಕೊಳೆ, ಕೆಂಪು ಕೊಳೆ, ಎಲೆ ಉದುರುವುದು ಇತ್ಯಾದಿ ರೋಗಗಳು ವ್ಯಾಪಿಸಿದೆ. ಸಾಕಷ್ಟು ಔಷಧ ಮತ್ತು ಟಾನಿಕ್ ಸಿಂಪಡಿಸಿದರೂ ಸಹ ರೋಗ ಹತೋಟಿಗೆ ಬರುತ್ತಿಲ್ಲ. ಆದ್ದರಿಂದ ರೈತರು ತುಂಬಾ ಕಂಗೆಟ್ಟಿದ್ದಾರೆ.
